– ಮಾಡೋ ಕೆಲಸ ಮಾಡಲಿ, ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಡ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷ್ಯ ಹೇಳುವುದಕ್ಕೆ ಶುರು ಮಾಡಿದರೋ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರಾಗಿರುವ ಕಾರಣ ಕೆಲಸ ಇಲ್ಲದೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಅದಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಆಗಾಗಾ ಜ್ಯೋತಿಷ್ಯ ಹೇಳುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
Advertisement
ಸರ್ಟಿಫಿಕೇಟ್ ಬೇಡ: ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತು ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಪಕ್ಷದಲ್ಲಾಗುತ್ತಿರುವುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಉಸಾಬರಿ ಏಕೆ? ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಮಗೆ ಕೇಂದ್ರ ಗೃಹ ಸಚಿವರ ಸರ್ಟಿಫಿಕೇಟ್ ಸಾಕು ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ ಎಂದರು.
Advertisement
Advertisement
ಅವರು ಪದೇ ಪದೇ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ತಮ್ಮ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಪ್ರಚಾರಕ್ಕಾಗಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ. ಮುಖ್ಯಮಂತ್ರಿಗಳು ಕೋವಿಡ್ ಹಾಗೂ ಉಳಿದ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಇನ್ನು ಎರಡೂವರೆ ವರ್ಷ ಆಡಳಿತ ನಡೆಸುತ್ತಾರೆ. ಉತ್ತಮ ಮತ್ತು ದಕ್ಷ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮಗೆ ಶಾ ಅವರ ಸರ್ಟಿಫಿಕೇಟ್ ಸಾಕು. ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ. ಅದನ್ನು ಅವರೇ ಇಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.
Advertisement
ರಾಜ್ಯದಲ್ಲಿ ದೊಡ್ಡ ಸುದ್ದಿಯಲ್ಲಿರುವ ಸಿಡಿ ವಿಚಾರದ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ಸಿಡಿ ಬಗ್ಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವುದು ಬೆಂಗಳೂರು ಅಭಿವೃದ್ಧಿಯ ಸಿಡಿ. ಮುಖ್ಯಮಂತ್ರಿಗಳು ಈಗಾಗಲೇ 2 ಸಭೆ ನಡೆಸಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೊಂದು ರೂಪುರೇಷೆ ನೀಡಿ ಸಂಬಂಧಿಸಿದ ಸಿಡಿಯನ್ನು ನಮಗೆ ಕಳುಹಿಸುವುದಾಗಿ ಹೇಳಿದ್ದಾರೆ. ಅದು ಬಿಟ್ಟು ಬೇರೆ ಮಾಹಿತಿ ನನಗೆ ಇಲ್ಲ. ಅದನ್ನು ಹೇಳಿದವರಿಗೇ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ “ಡಬಲ್ ಇಂಜಿನ್” ಅಭಿವೃದ್ಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದಲ್ಲದೆ, ವೇಗ ಪಡೆದುಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ 8-9 ತಿಂಗಳು ಎಲ್ಲ ಕಡೆಯೂ ಅಭಿವೃದ್ಧಿ ಕುಂಠಿತಗೊಂಡಿತ್ತು. ಆದರೆ ಈಗ ಎಲ್ಲವೂ ಪ್ರಾರಂಭವಾಗಿದೆ. ಒಂದೊಂದು ಕ್ಷೇತ್ರಕ್ಕೆ ಲೋಕೋಪಯೋಗಿಯಿಂದ ಸುಮಾರು 25 ಕೋಟಿ ರೂಪಾಯಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗೆ ಒಂದೊಂದಾಗಿ ಚಾಲನೆ ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.