– ಡಿಕೆಶಿ ಭೇಟಿ ಬೆನ್ನಲ್ಲೇ ದಾಳ ಉರುಳಿಸಿದ್ರಾ ಸಿದ್ದರಾಮಯ್ಯ?
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ರಾಜಕೀಯ ಅಂಗಳದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಆಪ್ತ ಶಿಷ್ಯ ಜಮೀರ್ ನಿವಾಸಕ್ಕೆ ಭೇಟಿ ನೀಡುವ ಮೂಲಕ ಇಬ್ಬರ ಜಗಳದಲ್ಲಿ ರಾಜಕೀಯ ಲಾಭಕ್ಕೆ ಮುಂದಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬ್ರೇಕ್ ಹಾಕಿದ್ರು ಎಂಬ ಚರ್ಚೆಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಜಮೀರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಸಿದ್ದರಾಮಯ್ಯ ಶಿಷ್ಯನ ಜೊತೆ ಅಂತರ ಕಾಯ್ದುಕೊಂಡಿದ್ದರು. ಇಡಿ ದಾಳಿಯ ವಿಚಾರವಾಗಿ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇತ್ತ ಸದಾ ಸಿದ್ದರಾಮಯ್ಯನವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಮೀರ್ ಅಹ್ಮದ್ ಖಾನ್ ಇದ್ದಕ್ಕಿದ್ದಂತೆ ಮಾಯವಾಗಿದ್ದರು. ಸಿದ್ದರಾಮಯ್ಯನವರ ಹುಟ್ಟುಹಬ್ಬದಂದು ಕರೆ ಮಾಡಿ ಶುಭಕೋರಿದ್ದರು.
ಇಬ್ಬರ ನಡುವಿನ ವೈಮನಸ್ಸು ಕಾಣಿಸಿಕೊಂಡಾಗಲೇ, ಡಿ.ಕೆ.ಶಿವಕುಮಾರ್ ಭೇಟಿ ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿತ್ತು. ಇದೀಗ ಆಪ್ತರ ಸಲಹೆ ಮೇರೆಗೆ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಇಡಿ ದಾಳಿ ಕುರಿತು ಚರ್ಚೆ ನಡೆಸಿ, ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರ ರಾಜಿ ಸಂದಾನ:
ಭೇಟಿಯ ಆರಂಭದಲ್ಲಿಯೇ ನಿಮ್ಮ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ ಅನ್ನುತ್ತಲೇ ಜಮೀರ್ ಅಹ್ಮದ್ ಮಾತು ಆರಂಭಿಸಿದರಂತೆ. ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಡಿ ದಾಳಿ ವೇಳೆ ನೀನು ಟೆನ್ಷನ್ ನಲ್ಲಿ ಇರ್ತಿಯಾ ಎಂದು ನಾನು ಕರೆ ಮಾಡಲಿಲ್ಲ. ನನಗೂ ನಿನ್ನ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದು ಮೂರನೇ ಬಾರಿ ಹೇಳುತ್ತಿದ್ದೇನೆ. ಮಾಧ್ಯಮ ಮತ್ತು ನಮ್ಮವರೇ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
ಐಎಂಎ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಐಎಂಎ ಹಣದಿಂದಲೇ ಈ ಮನೆ ಕಟ್ಟಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಅಂತ ಜಮೀರ್ ಅಸಮಾಧಾನ ಹೊರಹಾಕಿದ್ರು ಎಂದು ತಿಳಿದು ಬಂದಿದೆ. ಇದಕ್ಕೆ ನನಗೆ ಎಲ್ಲ ಗೊತ್ತಿದೆ. ಇಡಿ ಪ್ರಕರಣದ ಬಗ್ಗೆ ಹಿರಿಯ ವಕೀಲರ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಇಡಿಗೆ ಕೊಡು ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ:ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ: ಜಮೀರ್ಗೆ ಸಿದ್ದರಾಮಯ್ಯ ಬುಲಾವ್
ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿದ್ದೇನು?:
ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯನವರು, ಗೃಹಪ್ರವೇಶಕ್ಕೆ ಬರಲು ಆಗಿರಲಿಲ್ಲ. ನಿವಾಸಕ್ಕೆ ಬನ್ನಿ ಎಂದು ಜಮೀರ್ ಪದೇ ಪದೇ ಕರೆಯುತ್ತಿದ್ದರು. ನಿನ್ನೆ ಸಹ ಔತಣಕೂಟಕ್ಕೆ ಆಹ್ವಾನ ನೀಡಿದ್ದರಿಂದ ಇಂದು ಬಂದು ಊಟ ಮಾಡಿದ್ದೇನೆ. ಇದೊಂದು ಖಾಸಗಿ ಭೇಟಿಯಾಗಿದ್ದು, ಯಾವುದೇ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆದಿಲ್ಲ. ಜಾರಿನಿರ್ದೇಶನಾಲಯದ ದಾಳಿಯ ಪ್ರಕರಣವನ್ನು ಜಮೀರ್ ಅವರ ವಕೀಲರು ಮತ್ತು ಲೆಕ್ಕಾಧಿಕಾರಿಗಳುಯ ನೋಡಿಕೊಳ್ಳುತ್ತಾರೆ. ಪಕ್ಷದ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. ಇದನ್ನೂ ಓದಿ: ಶಾಸಕ ಜಮೀರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ