ಧಾರವಾಡ: ಸಿದ್ದರಾಮಯ್ಯ – ಈಶ್ವರಪ್ಪನ್ನ ಆ ಬೀರಪ್ಪನೇ ಕಾಯಬೇಕು ಎಂದು ಧಾರವಾಡದ ಮನ್ಸೂರ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಹೇಳಿದ್ದಾರೆ.
ಮೀಸಲಾತಿ ಹೋರಾಟದ ಮಧ್ಯೆ ಸಿದ್ದರಾಮಯ್ಯ- ಈಶ್ವರಪ್ಪ ನಡುವೆ ನಡೆದಿರುವ ಮಾತಿನ ವಾಕ್ಸಮರ ವಿಚಾರವಾಗಿ ಧಾರವಾಡದ ಮನ್ಸೂರ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಪ್ರತಿಕ್ರಿಯಿಸಿದ್ದಾರೆ. ಇದು ಸಂವಿಧಾನಿಕ ಹಕ್ಕು ಕೇಳುವ ಸಮಯ, ಈ ವೇಳೆ ಬೇರೆ ಬೇರೆ ವಿಚಾರ ಬರಬಾರದು ಎಂದು ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಇವರ ವ್ಯಕ್ತಿ ಪ್ರತಿಷ್ಠೆಯ ಮಧ್ಯೆ ಕುರುಬರ ಕುರಿಗಳನ್ನು ಎಲ್ಲೋ ಒಂದು ಕಡೆ ನೂಕುತ್ತಾರೆನೋ ಎಂದು ಹೇಳಿದರು. ಸಿದ್ದರಾಮಯ್ಯ-ಈಶ್ವರಪ್ಪನವರನ್ನು ಆ ಬೀರಪ್ಪನೇ ಕಾಯಬೇಕು ಎಂದ ಸ್ವಾಮೀಜಿ, ಎಸ್‍ಟಿ ಹೋರಾಟ ವ್ಯಕ್ತಿ ಪ್ರತಿಷ್ಠೆ ಆಗಬಾರದು, ಇವರೆಲ್ಲ ಸಮುದಾಯದಿಂದ ನಾಯಕರಾಗಿದ್ದಾರೆ. ನಾಯಕರಿಂದ ಸಮುದಾಯ ಅಲ್ಲ. ಇದನ್ನು ಈ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂವಿಧಾನದ ಹಕ್ಕು ಪಡೆಯಲು ಎಲ್ಲ ನಾಯಕರು ಒಗ್ಗೂಡಬೇಕು, ಈಶ್ವರಪ್ಪ ಅಥವಾ ಸಿದ್ದರಾಮಯ್ಯ ಎಂದು ಪ್ರತಿಷ್ಠೆ ಆಗಬಾರದು. ಅಲ್ಲದೆ ಅವರು ಹಾಗೆ, ಇವರೂ ಹೀಗೆ ಎಂದು ಮಾತನಾಡುತ್ತಿದ್ದಾರೆ. ಇವರಿಬ್ಬರಿಗೂ ಸಮಾಜದ ಭಯ ಇರಬೇಕು, ಆತ್ಮಸಾಕ್ಷಿ ಬೇಕು, ಯಾರೇ ಆಗಲಿ ಸಮಾಜವನ್ನು ಬಲಿ ಕೊಡಬಾರದು. ಸಮುದಾಯದ ದಿಕ್ಕು ತಪ್ಪಿಸಬಾರದು. ಆ ರೀತಿ ಇಬ್ಬರೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದರಲ್ಲಿ ಬೇರೆ ಯಾವುದೋ ವಾಸನೆ ಅಡಗಿದೆ. ಆ ವಾಸನೆ ಬಗ್ಗೆ ಜನ ಆಡಿಕೊಳ್ಳಬಾರದು ಎನ್ನುವುದೇ ನಮ್ಮ ನೋವು ಎಂದು ಸ್ವಾಮೀಜಿ ಹೇಳಿದರು.