– ನಾನು ಯಾವುದೇ ತಪ್ಪು ಮಾಡಿಲ್ಲ
– ನಾಮಕರಣಕ್ಕೆ ಮೂರು ಪಕ್ಷದ ನಾಯಕರು ಬಂದಿದ್ರು
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಯಾವುದೇ ದುಡ್ಡು ತೆಗೆದುಕೊಂಡಿಲ್ಲ ಎಂದು ಮಾಜಿ ಪತ್ರಕರ್ತ ನರೇಶ್ ಗೌಡ ಹೇಳಿದ್ದಾರೆ.
ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅವರು, ನಾನು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಐದು ಅಥವಾ ಎಂಟು ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಹೇಳಿದ್ದು ಏನು?
ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ನಾನು ಯಾಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದ್ರೆ ಪೊಲೀಸರು ಏನ್ ಮಾಡ್ತಾರೆ ಅನ್ನೋದು ನನಗೆ ಗೊತ್ತು. ಈ ಕೇಸ್‍ಗೂ ನನಗೂ ಸಂಬಂಧ ಇಲ್ಲ
ಚಾನೆಲಿನಲ್ಲಿ ಉದ್ಯೋಗದಲ್ಲಿದ್ದಾಗ ನಾನು ಈ ಹಿಂದೆ ಸಾಕಷ್ಟು ಸ್ಟಿಂಗ್ ಆಪರೇಷನ್ ಮಾಡಿದ್ದೇನೆ. ನನ್ನ ಬಗ್ಗೆ ಯಾವುದೇ ಆರೋಪ ಬಂದಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಯಾಕೆ ಬಂದಿದೆ ಎನ್ನುವುದು ಗೊತ್ತಾಗುತ್ತಿಲ್ಲ.
ಪತ್ರಕರ್ತನಾಗಿರುವ ಕಾರಣ ಯುವತಿ ಈ 4-5 ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ರಮೇಶ್ ಜಾರಕಿಹೊಳಿಯಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕೊಡಿಸಬೇಕೆಂದು ಕೇಳಿದ್ದರು. ನಾನು ಸಾಕ್ಷ್ಯಗಳು ಇಲ್ಲದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ದಾಖಲೆ, ಫೋಟೋ, ಕ್ಲಿಪ್ಪಿಂಗ್ ಏನಾದ್ರೂ ಇದೆಯಾ ಅಂತಾ ಕೇಳಿದ್ದೆ. ಈ ನಡುವೆ ನನ್ನ ತಾಯಿಗೆ ತಾಯಿಗೆ ಹುಷಾರಿರಲಿಲ್ಲ, ನನ್ನ ಮಗಳ ನಾಮಕರಣ ಇತ್ತು. ಹೀಗಾಗಿ ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ
15-20 ಬಾರಿ ಆ ಹುಡುಗಿ ಜೊತೆ ಮಾತನಾಡಿದ್ದೇನೆ. ನನ್ನ ಮಗಳ ನಾಮಕರಣ ಕೂಡ ಇತ್ತು. ನನ್ನನ್ನು ಕರೆಯಲ್ವಾ ಅಂದ್ರು, ಆ ಹುಡುಗಿ ಕೂಡ ನಾಮಕರಣಕ್ಕೆ ಬಂದ್ರು ಹೋದ್ರು. ಈ ಪ್ರಕರಣದಲ್ಲಿ ನಾನೇ ದೊಡ್ಡ ಸೂತ್ರಧಾರಿ ಅನ್ನೋ ರೀತಿ ಬಿಂಬಿಸೋಕೆ ಆರಂಭ ಮಾಡಿದ್ದಾರೆ. ಇದ್ರಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ. 5 ಕೋಟಿ, 100 ಕೋಟಿ ಆರೋಪಗಳಿಗೆ ಸ್ಪಷ್ಟನೆ ಕೊಡಬೇಕಲ್ಲ ಎಂದು ವಿಡಿಯೋ ಮಾಡಿದ್ದೇನೆ.
ನಾನು ಮಾಡಿರೋ 3 ಲಕ್ಷ ಸಾಲ ತೀರಿಸೋಕೆ ಆಗುತ್ತಿಲ್ಲ, ಎರಡೆರಡು ಬಾರಿ ಚೆಕ್ ಬೌನ್ಸ್ ಕೂಡ ಆಗಿದೆ. ಕ್ರೆಡಿಟ್ ಕಾರ್ಡ್ ಇಎಂಐ ಕಟ್ಟಲು ಆಗದೇ ಇಂಟ್ರೆಸ್ಟ್ ಕಟ್ಟುತ್ತಿದ್ದೇನೆ. ಶಿರಾ ತಾಲೂಕು ಭುವನಹಳ್ಳಿ ನನ್ನ ಹುಟ್ಟೂರು. ವರ್ಷಕ್ಕೊಂದು ಸರಿ ಮಳೆ ಬಂದ್ರೆ ಸೋರುತ್ತೆ ನನ್ನ ಮನೆ. 100 ಕೋಟಿ ಆರೋಪ ಮಾಡ್ತಿರಲ್ಲ, ತಂದು ಕೊಡಿ, ನಾನೇ ಆರೋಪಿ ಎಂದು ಒಪ್ಪಿಕೊಳ್ಳುತ್ತೇನೆ.
ಕಳೆದ 3-4 ತಿಂಗಳ ಹಿಂದೆ ಕೋರಮಂಗಲದಲ್ಲೂ 14 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಕಿರುಕುಳ ಆರೋಪದ ಸ್ಟೋರಿ ಮಾಡಿದ್ದೆ. 5 ರೂಪಾಯಿ ನಾನು ತೆಗೆದುಕೊಂಡಿದ್ದು, ತೋರಿಸಿದ್ರೆ ಶಿಕ್ಷೆ ಅನುಭವಿಸೋಕೆ ಸಿದ್ಧ. ಮಗಳ ನಾಮಕರಣಕ್ಕೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅವರು ಎಲ್ಲರೂ ಬಂದಿದ್ದರು.
ನಾನು ಯಾಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದ್ರೆ, ಏನ್ ಪ್ಲಾನ್ ನಡೆದಿದೆ ಅನ್ನೋದು ನನಗೆ ಗೊತ್ತು. ಅದಕ್ಕೆ ನಾನು ಬಂದಿಲ್ಲ 8 ದಿನ ಅಥವಾ 5 ದಿನದಲ್ಲಿ ನಾನು ಪೊಲೀಸರ ಮುಂದೆ ಬರ್ತಿನಿ. ರಮೇಶ್ ಜಾರಕಿಹೊಳಿ ನಿರಪರಾಧಿ ಅಂತಾ ಬಿಂಬಿಸಲಾಗ್ತಿದೆ.
ಹೆಣ್ಣು ಮಗಳನ್ನು ಅಪರಾಧಿ ಥರ ಬಿಂಬಿಸಲಾಗ್ತಿದೆ . ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ನಾಡ ದ್ರೋಹಿ ರಮೇಶ್ ಜಾರಕಿಹೊಳಿ. ಆ ಹುಡುಗಿ ಪರ ನಿಲ್ಲೋದು ನಮ್ಮ ಧರ್ಮ. ರಮೇಶ್ ಜಾರಕಿಹೊಳಿ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ.
ಸಿಡಿ ಹೇಗಾಯ್ತು, ಸಿಡಿ ಹೇಗೆ ಆಚೆ ಬಂತು ಅದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಎಳ್ಳಷ್ಟು ಪಾತ್ರವಿಲ್ಲ. ನಾನು ಸದ್ಯದಲ್ಲೇ ಬರ್ತಿನಿ. ನನಗೆ ಏನು ಮಾಹಿತಿ ಇದೆ ಕೊಡ್ತಿನಿ. ನಾನು ನಿರ್ದೋಷಿ ಅನ್ನೋದು ತನಿಖೆಯಿಂದ ಗೊತ್ತಾಗುತ್ತೆ.