ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‍ಐಟಿ) ಈಗ ಶಿವಕುಮಾರ್ ಬೆನ್ನು ಬಿದ್ದಿದೆ.
ಅಸಲಿಗೆ ಈ ಪ್ರಕರಣದಲ್ಲಿರುವ ಶಿವಕುಮಾರ್ ಕನಕಪುರ ಮೂಲದ ವ್ಯಕ್ತಿಯಾಗಿದ್ದು, ಗ್ರಾನೈಟ್ ಉದ್ಯಮ ನಡೆಸುತ್ತಿದ್ದಾನೆ. ಈತನಿಗೆ ಸಿಡಿ ಸೂತ್ರದಾರರ ಜೊತೆ ನಂಟು ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಡಿ ಹುಡುಗರಿಗೆ 10 ಲಕ್ಷ ಹಣ ಸಂದಾಯ ಮಾಡಿದ್ದ ಶಿವಕುಮಾರ್ ಸಿಡಿ ರಿಲೀಸ್ ಬಳಿಕ ಯುವತಿಯ ಗೆಳೆಯನಿಗೆ 50 ಸಾವಿರ ಕೊಟ್ಟಿದ್ದಾನೆ. ಯುವತಿಯನ್ನು ಗೋವಾಗೆ ಕರೆದೊಯ್ಯಲು 50 ಸಾವಿರ ರೂ. ಕೊಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಕೊಚ್ಚಿಯಲ್ಲಿ ಶಿವಕುಮಾರ್ ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ಪತ್ತೆಗೆ ಈಗ ಬಲೆ ಬೀಸಲಾಗಿದೆ. ಕಾಲ್ ಡಿಟೈಲ್ಸ್‌ನಲ್ಲಿ ಈತ ಸಿಡಿ ಗ್ಯಾಂಗ್ ಸದಸ್ಯರ ಜೊತೆ ನಿಖಟ ಸಂಪರ್ಕ ಹೊಂದಿದ್ದ ಮಾಹಿತಿಯೂ ಸಿಕ್ಕಿದೆ.
ಎಸ್‍ಐಟಿ ಪೊಲೀಸರು ಈಗ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎರಡು ದಿನ ಬ್ಯಾಂಕ್ ಮುಷ್ಕರ ಇದ್ದ ಹಿನ್ನೆಲೆಯಲ್ಲಿ ಮಾಹಿತಿ ಸಿಕ್ಕಿರಲಿಲ್ಲ. ಬುಧವಾರ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಗ್ಯಾಂಗ್ ಸದಸ್ಯರ ಖಾತೆಗೆ ಈತ ಹಣ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.