– ಪ್ರಕರಣದ ಸೂತ್ರಧಾರನೂ ಅಲ್ಲ, ಪಾತ್ರದಾರನೂ ಅಲ್ಲ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣಕ್ಕೊಂದು ಕ್ಷಣಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಭವಿತ್ ಅಜ್ಞಾತ ಸ್ಥಳದಿಂದ ವೀಡಿಯೋ ಹೇಳಿಕೆ ನೀಡಿದ್ದು, ನನ್ನ ಹೆಸರು ಪ್ರಸ್ತಾಪ ಆಗಿದ್ದಕ್ಕೆ ಆಘಾತ ಆಗಿದೆ. ನಾನು ಪ್ರಕರಣದ ಸೂತ್ರಧಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಹೋಗುತ್ತಿದ್ದೇನೆ. ಪೊಲೀಸ್ ತನಿಖೆಯಲ್ಲಿ ಸತ್ಯ ಹೊರ ಬರಲಿದೆ. ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿದ್ದರಿಂದ ತೇಜೋವಧೆ ಆಗುತ್ತಿರೋದರಿಂದ ಮನಸ್ಸಿಗೆ ನೋವು ಆಗುತ್ತಿದೆ.
ನನಗೊಂದು ಕುಟುಂಬ ಇದೆ. ತಾಯಿ ಹಾರ್ಟ್ ಪೇಶೆಂಟ್. ನನ್ನ ಮನೆಗೆ ಹೋಗಿ ನೋಡಿ, ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಕುಟುಂಬದ ಗೌರವ ಹಾಳು ಮಾಡೋದು ಎಷ್ಟು ಸರಿ? ಪ್ರಕರಣದಲ್ಲಿ ನನ್ನ ಪಾತ್ರ ಇದ್ದಿದ್ರೆ ಒಪ್ಪಿಕೊಳ್ಳುತ್ತಿದ್ದೆ. ತಪ್ಪು ಮಾಡದೇ ಇರೋದರಿಂದ ಸುಳ್ಳು ಆರೋಪಗಳನ್ನ ಹೇಗೆ ಒಪ್ಪಿಕೊಳ್ಳಲು ಸಾಧ್ಯ. ತಪ್ಪಿತಸ್ಥ ಆಗಿದ್ರೆ ನಾಪತ್ತೆ ಆಗ್ತಿದ್ದೆ, ಆದ್ರೆ ನಾನೂ ಎಲ್ಲಿಯೂ ಹೋಗಿಲ್ಲ. ಮೊಬೈಲ್ ಸಹ ಆಫ್ ಮಾಡಿಲ್ಲ. ಎಸ್‍ಐಟಿ ಕರೆದಾಗ ತಡಮಾಡದೇ ಬಂದು ನನ್ನ ಹೇಳಿಕೆ ದಾಖಲಿಸಿದ್ದೇನೆ ಎಂದು ಭವಿತ್ ಹೇಳಿದ್ದಾರೆ. ಇದನ್ನೂ ಓದಿ: ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ
ಇದಕ್ಕೂ ಮೊದಲು ಸಿಡಿ ಪ್ರಕರಣದ ಕಿಂಗ್‍ಪಿನ್ ಎನ್ನಲಾಗುತ್ತಿರುವ ಶಿರಾ ಮೂಲದ ಮಾಜಿ ಪತ್ರಕರ್ತ ನರೇಶ್ ಗೌಡ ಸಹ ತಮ್ಮ ಹೇಳಿಕೆ ಬಿಡುಗಡೆಗೊಳಿಸಿದ್ದರು. ನಾನು ಎಸ್‍ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಐದು ಅಥವಾ ಎಂಟು ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಮಕರಣಕ್ಕೆ ಮೂರು ಪಕ್ಷದ ನಾಯಕರು ಬಂದಿದ್ರು, ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ದುಡ್ಡು ತೆಗೆದುಕೊಂಡಿಲ್ಲ – ನರೇಶ್ ಗೌಡ