ಬೆಂಗಳೂರು/ ಮೈಸೂರು: ಮಾಜಿ ಮಂತ್ರಿ ಸಿಡಿ ಪ್ರಕರಣದ ಮೊದಲ ಬಾರಿಗೆ ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯಿಸಿದೆ. ಆರೋಪ ಕೇಳಿಬಂದ ಕೂಡಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಾಯ್ತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಆರೋಪ ಬಂದ ತಕ್ಷಣ ರಾಜೀನಾಮೆ ಪಡೆಯುವುದು ಬಿಜೆಪಿ ಮಾತ್ರ. ಆದ್ರೆ, ಈ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ತಿದೆ ಎಂದು ಆರೋಪಿಸಿದರು.
ಆರು ಸಚಿವರು ಕೋರ್ಟ್‍ಗೆ ಹೋದರೆ ಕಾಂಗ್ರೆಸ್‍ಗೆ ಏನು ಸಮಸ್ಯೆ ಎಂದು ಅರುಣ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‍ನ ದೊಡ್ಡ ದೊಡ್ಡ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ದೂಷಿಸಿದ್ದಾರೆ.
ಸಿಡಿ ಕೇಸ್ ಬೆನ್ನಲ್ಲೇ ಮಾನಹಾನಿಕಾರಕ ಸುದ್ದಿಗೆ ತಡೆ ನೀಡಲು ಕೋರಿ ಕೋರ್ಟ್ ಮೊರೆ ಹೋಗಿದ್ದನ್ನು ಸಚಿವರಾದ ಸುಧಾಕರ್, ಎಸ್‍ಟಿ ಸೋಮಶೇಖರ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಸಚಿವ ಸುಧಾಕರ್ ಮಾತನಾಡಿ, ಕಾಂಗ್ರೆಸ್ ಈ ಬಗ್ಗೆ ಸದನದಲ್ಲಿ ಮಾತನಾಡಲಿ. ಆಗ ತಕ್ಕ ಉತ್ತರ ಕೊಡ್ತೇನೆ ಅಂತಾ ಸವಾಲು ಹಾಕಿದರು.
ಮೈಸೂರಲ್ಲಿ ಮಾತಾಡಿದ ಸಚಿವ ಎಸ್‍ಟಿ ಸೋಮಶೇಖರ್, ಸಿಡಿ ವಿಚಾರಕ್ಕಾಗಿ ನಾವು ಕೋರ್ಟ್ ಮೊರೆ ಹೋಗಲಿಲ್ಲ. ನಾವು ಒಂದು ಸರ್ಕಾರ ಬೀಳಿಸಿ ಮತ್ತೊಂದು ಸರ್ಕಾರ ತಂದ ಕಾರಣ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಇತ್ತು. ಹೀಗಾಗಿ ನಮ್ಮ ವೈಯಕ್ತಿಕ ತೇಜೋವಧೆ ತಪ್ಪಿಸಲು ಕೋರ್ಟ್ ಮೊರೆ ಹೋದೆವು. ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಆಗದೇ, ಸಿಡಿ ಬಗ್ಗೆ ಚರ್ಚೆ ಆಗ್ತಿದೆ. ಹೀಗಾಗಿ ನನಗೆ ಸದನಕ್ಕೆ ಹೋಗಲು ಬೇಜಾರಾಗುತ್ತಿದೆ ಎಂದರು.
ಸಿಡಿ ವಿಚಾರವಾಗಿ ಸೋಮವಾರ ಉಭಯ ಸದನಗಳಲ್ಲಿ ನಿಲುವಳಿ ಮಂಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.