ಚಿಕ್ಕಬಳ್ಳಾಪುರ: ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ 7 ಜನರಲ್ಲಿ 4 ಮಂದಿ ಸಾವನ್ನಪ್ಪಿದ್ದು, ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕು ಸೋಮಯಾಜಲಹಳ್ಳಿ ಗ್ರಾಮದಲ್ಲಿ ಇದೇ ತಿಂಗಳ 22ರಂದು ಸಿಡಿಲು ಬಡಿದು ಚಪ್ಪಡಿ ಮನೆ ಕುಸಿದು ಬಿದ್ದಿತ್ತು. ಸಿಡಿಲಿನ ಅಬ್ಬರಕ್ಕೆ ಮನೆ ಕುಸಿತಗೊಂಡು ಮನೆ ಮಾಲೀಕ ಆಂಬರೀಶ್ ಪತ್ನಿ ಗಾಯತ್ರಿ ಇವರ ಮಕ್ಕಳಾದ ಗೌತಮ್, ವಾಣಿ, ಲಾವಣ್ಯ, ದರ್ಶನ್ ಹಾಗೂ ಅಂಬರೀಶ್ ತಂದೆ ಜಗನ್ನ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. 7 ಮಂದಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದಾರೆ.
ಮೊದಲು ಗೌತಮ್ ಸಾವನ್ನಪ್ಪಿದ್ದು, ನಂತರ ಅಂಬರೀಶ್ ಹಾಗೂ ಇಂದು ಲಾವಣ್ಯ ಹಾಗೂ ವಾಣಿ ಶ್ರೀ ಇಬ್ಬರು ನಿಧನರಾಗಿದ್ದಾರೆ. ಅಂಬರೀಶ್ ಪತ್ನಿ ಗಾಯತ್ರಿ, ತಂದೆ ಜಗನ್ನ ಹಾಗೂ ಬಾಲಕ ದರ್ಶನ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನಾಲ್ವರ ಸಾವಿನಿಂದ ಸೋಮಯಾಜಲಹಳ್ಳಿ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತಹಶೀಲ್ದಾರ್ ಹನುಮಂತರಾಯಪ್ಪ, 7 ಮಂದಿಗೆ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಈಗ ನಾಲ್ವರು ಮೃತಪಟ್ಟಿದ್ದು, ಉಳಿದವರ ಸ್ಥಿತಿಯೂ ಗಂಭೀರವಾಗಿದೆ. ಘಟನೆ ಆಗಬಾರದಿತ್ತು, ಬಹಳ ನೋವಿನ ಸಂಗತಿ, ತುಂಬಾ ಬೇಸರವಾಗಿದೆ. ಇಡೀ ಕುಟುಂಬಕ್ಕೆ ಇಂತಹ ಪರಿಸ್ಥಿತಿ ಬಂದಿದ್ದು, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಅಂತ್ಯಕ್ರಿಯೆ ಸೇರಿ ಆಸ್ಪತ್ರೆಗೆ ಬೇಕಾಗುವ ಖರ್ಚು ವೆಚ್ಚಗಳನ್ನು ಭರಿಸಿದ್ದು, ಉಳಿದವರಾದರೂ ಬದುಕಿ ಬರಲಿ ಎಂದು ತಹಶೀಲ್ದಾರ್ ಆಶಿಸಿದರು.