ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಸಿಗಂಧೂರು ದೇವಸ್ಥಾನದ ಸುತ್ತಮುತ್ತಲಿನ ಒತ್ತುವರಿ ಅರಣ್ಯ ಭೂಮಿಯ ತೆರವು ಕಾರ್ಯಾಚರಣೆ ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ನಡೆಯಿತು.
ಸಿಗಂಧೂರು ದೇವಾಲಯದ ಟ್ರಸ್ಟ್ ದೇವಸ್ಥಾನದ ಸುತ್ತಮುತ್ತಲಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿ ಅರಣ್ಯ ಭೂಮಿಯನ್ನು ಸರ್ಕಾರ ತಕ್ಷಣ ವಶಪಡಿಸಿಕೊಳ್ಳಬೇಕು ಎಂದು ಸಾಗರ ಮೂಲದ ಲಕ್ಷ್ಮಿನಾರಾಯಣ ಎಂಬವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ನಂತರ ಅಂತಿಮವಾಗಿ ತೀರ್ಪು ನೀಡಿದ ನ್ಯಾಯಾಲಯ ದೇವಸ್ಥಾನದ ಸುತ್ತಮುತ್ತ 6 ಎಕರೆ 16 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಹೀಗಾಗಿ ಈ ಕೂಡಲೇ ತಹಶೀಲ್ದಾರ್ ಅವರು ತಮ್ಮ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.
ನ್ಯಾಯಾಲಯದ ಆದೇಶದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಡಿವೈಎಸ್ ಪಿ ವಿನಯ್ ಶೆಟಗೇರಿ ಒತ್ತುವರಿ ಅರಣ್ಯ ಭೂಮಿ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸುವ ಕಾರ್ಯ ನಡೆಸಿದರು.