ಬಳ್ಳಾರಿ: ನಾನು ಕೇಳಿದ ಖಾತೆ ಬೇರೆ ನನಗೆ ಕೊಟ್ಟಿರುವ ಖಾತೆ ಬೇರೆ ಎಂದು ಖಾತೆ ಹಂಚಿಕೆ ಬೆನ್ನಲ್ಲೇ ಪ್ರವಾಸೋದ್ಯಮ ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್ ಅವರು, ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ನೀಡಿದ್ದು ನಾನು, ಆ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಮೇ ಒಂದರಂದು ನಾನು ರಾಜೀನಾಮೆ ನೀಡಿದ್ದೆ. ನನ್ನಿಂದಲೇ ಬಿಜೆಪಿ ಸರ್ಕಾರ ಬಂದಿದೆ ಅನ್ನೋದಲ್ಲ. ನನ್ನಂತೆ ಹಲವು ಜನರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ. ಆದರೆ ಇದೀಗ ಖಾತೆ ಹಂಚಿಕೆಯಲ್ಲಿ ನಾನು ಕೇಳಿರೋದೇ ಒಂದು ಕೊಟ್ಟಿರೋದೇ ಒಂದು ಇದನ್ನು ಬದಲಾವಣೆ ಮಾಡಬೇಕೆಂದು ಯಡಿಯೂರಪ್ಪ ಮತ್ತು ಸಿಎಂ. ಬೊಮ್ಮಯಿ ಅವರನ್ನು ಕೇಳುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ ಆದರೆ ನಿರಾಸೆ ಮಾಡಿರೋದಕ್ಕೆ ಸಾಕಷ್ಟು ಬೇಸರವಾಗಿದೆ. ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದು ಒಳಿತು ಎನ್ನುವದು ನನ್ನ ನಿಲುವು. ಮತ್ತೊಮ್ಮೆ ಸಿಎಂಗೆ ಮನವಿ ಮಾಡುತ್ತೇನೆ ಕೊಡದೆ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಆನಂದ್ ಸಿಂಗ್ ನನ್ನ ಆತ್ಮೀಯ ಮಿತ್ರರು. ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.