ಸಿಎಸ್‍ಕೆ ಪರ ಧೋನಿಗಿಂತಲೂ ಹೆಚ್ಚು ಪಂದ್ಯ ಆಡಿದ್ದಾರೆ ರೈನಾ

Public TV
2 Min Read
raina

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಂತ ಸ್ಥಿರವಾದ ಫ್ರ್ಯಾಂಚೈಸ್‍ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಇದುವರೆಗೂ ಒಬ್ಬ ನಾಯಕನನ್ನು ಮಾತ್ರ ಹೊಂದಿದೆ. ಎಂ.ಎಸ್ ಧೋನಿ ಅವರು ಮೊದಲು 9.5 ಕೋಟಿ ರೂ.ಗೆ ತಂಡವನ್ನು ಸೇರಿಕೊಂಡಿದ್ದರು. ಅವರು ಪ್ರತಿ ಬಾರಿಯ ಐಪಿಎಲ್‍ನಲ್ಲಿ ಸಿಎಸ್‍ಕೆ ತಂಡವನ್ನು ಮುನ್ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಸಿಎಸ್‍ಕೆ ತಂಡವು ಪ್ರತಿ ಬಾರಿಯೂ ಪ್ಲೇಆಫ್‍ನಲ್ಲಿ ಸ್ಥಾನ ಪಡೆಯುತ್ತಾ ಬಂದಿದೆ. ಅಷ್ಟೇ ಅಲ್ಲದೆ ಮತ್ತು ಇದುವರೆಗೂ ಮೂರು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ.

190 ಐಪಿಎಲ್ ಪಂದ್ಯಗಳನ್ನು ಆಡಿದ ಧೋನಿ, ಸಿಎಸ್‍ಕೆ ಪರ ಹೆಚ್ಚು ಪಂದ್ಯ ಆಡಿದ ಆಟಗಾರರಲ್ಲಿ ಒಬ್ಬರು. ಆದರೆ ಅವರು ಸಿಎಸ್‍ಕೆ ಪರ ಹೆಚ್ಚು ಪಂದ್ಯ ಆಡಿದ ಆಟಗಾರರಲ್ಲ. ಹೌದು, ಸಿಎಸ್‍ಕೆ ಪರ 160 ಪಂದ್ಯಗಳನ್ನು ಆಡಿರುವ ಧೋನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗಾದರೆ ಯಾರು ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ ಅಂತ ನಿಮಗೆ ಗೊತ್ತಾ?

Suresh Raina

ಸುರೇಶ್ ರೈನಾ ಅವರು ಸಿಎಸ್‍ಕೆ ಪರ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‍ನಲ್ಲಿ ಸಿಎಸ್‍ಕೆ ಇದುವರೆಗೂ 165 ಪಂದ್ಯಗಳನ್ನು ಆಡಿದ್ದು, ಈ ಪೈಕಿ 164 ಪಂದ್ಯಗಳಲ್ಲಿ ಎಡಗೈ ಬ್ಯಾಟ್ಸ್‍ಮನ್ ರೈನಾ ಆಡಿದ್ದಾರೆ. ಸ್ನಾಯು ಸೆಳೆತದ ಹಿನ್ನೆಲೆಯಲ್ಲಿ ರೈನಾ ಅವರು ಸಿಎಸ್‍ಕೆ ಪರ ಆಡುವುದನ್ನು ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದರು.

ರೈನಾ ಸಿಎಸ್‍ಕೆಗೆ ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಪಂದ್ಯವನ್ನು ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅವರು ಐಪಿಎಲ್‍ನಲ್ಲಿ 193 ಪಂದ್ಯಗಳನ್ನು ಆಡಿದ್ದಾರೆ. ಧೋನಿ 190 ಪಂದ್ಯಗಳನ್ನು ಆಡಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ ಸ್ಥಾನದಲ್ಲಿರುವ ರೋಹಿತ್ ಶರ್ಮಾ 188 ಪಂದ್ಯ, ದಿನೇಶ್ ಕಾರ್ತಿಕ್ 182 ಪಂದ್ಯ ಮತ್ತು ವಿರಾಟ್ ಕೊಹ್ಲಿ 177 ಪಂದ್ಯ ಆಡಿದ್ದಾರೆ.

Mike Hussey MS Dhoni A

ಧೋನಿ 2010ರಲ್ಲಿ ಸಿಎಸ್‍ಕೆ ಪರ ಆಡುವುದನ್ನು ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದರು. ಆ ಬಳಿಕ 2011ರಿಂದ 2015 ರವರೆಗೆ ಮತ್ತು 2017 ಮತ್ತು 2018ರಲ್ಲಿ ಅವರು ಒಂದೇ ಒಂದು ಪಂದ್ಯವನ್ನು ತಪ್ಪಿಸಲಿಲ್ಲ. ಬೆನ್ನು ನೋವಿನಿಂದಾಗಿ ಐಪಿಎಲ್ 2019ರಲ್ಲಿ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಟೀಂ ಇಂಡಿಯಾ ಮಾಜಿ ನಾಯಕ 2019ರ ವಿಶ್ವಕಪ್‍ಗೆ ಸ್ವಲ್ಪ ಮುಂಚಿತವಾಗಿ ಬೆನ್ನಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು. ಆಗ ಎರಡು ಪಂದ್ಯಗಳಿಗೆ ಅವರು ಅಲಭ್ಯವಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *