– ಐಪಿಎಲ್ ಮೇಲೆ ಕೊರೊನಾ ಕರಿನೆರಳು
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2020ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಮತ್ತು ತಂಡದ 12 ಮಂದಿ ಸಹಾಯಕ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೊರೊನಾ ಕಾಣಿಸಿಕೊಂಡ ಚೆನ್ನೈ ತಂಡದ ಎಲ್ಲ ಆಟಗಾರರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರನ್ನೂ ಐಸೊಲೇಶನ್ ಮಾಡಲಾಗಿದೆ. ಆರೋಗ್ಯ ಅಧಿಕಾರಿಗಳ ನಿರ್ದೇಶನದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‍ಗಳನ್ನು ಅನುಸರಿಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಂದಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗಸ್ಟ್ 21ರಂದೇ ಯುಎಇಗೆ ತೆರಳಿತ್ತು. ಎಂದಿನಂತೆ ಎಲ್ಲ ಆಟಗಾರರಿಗೆ ಭಾರತದಲ್ಲೂ ಕೂಡ ಒಂದು ಬಾರಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅಂತೆಯೇ ಯುಎಇಗೆ ತೆರಳಿದ ತಂಡ ಅಲ್ಲಿ ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿತ್ತು. ಇಂದಿಗೆ ಆ ಅವಧಿ ಮುಗಿಯಲಿದ್ದು, ಇಂದು ಚೆನ್ನೈ ತಂಡ ಅಭ್ಯಾಸ ನಡೆಸಬೇಕಿತ್ತು. ಆದರೆ ಇಂದು ಮಾಡಿದ ಕೊರೊನಾ ಟೆಸ್ಟ್ ನಲ್ಲಿ ತಂಡದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದಂತೆ ಬಹುತೇಕ ತಂಡಗಳು ಯುಎಇಯಲ್ಲಿ ಅಭ್ಯಾಸವನ್ನು ಆರಂಭ ಮಾಡಿವೆ. ಅಂತಯೇ ಚೆನ್ನೈ ಕೂಡ ಇಂದು ಅಭ್ಯಾಸದಲ್ಲಿ ತೊಡಗಬೇಕಿತ್ತು. ಆದರೆ ಈಗ ಸದ್ಯಕ್ಕೆ ಚೆನ್ನೈ ತಂಡ ಮತ್ತೆ ಮುಂದಿನ ಆರು ದಿನಗಳು ಕ್ವಾರಂಟೈನ್ ಆಗಬೇಕಿದೆ. ಚೆನ್ನೈ ತಂಡ ಸೆಪ್ಟೆಂಬರ್ 1ರಿಂದ ಅಭ್ಯಾಸ ನಡೆಸುವುದಾಗಿ ಹೇಳಿಕೊಂಡಿದೆ.
ಕೊರೊನಾ ವೈರಸ್ ಕಾರಣದಿಂದಲೇ ಕಳೆದ ಮಾರ್ಚ್‍ನಲ್ಲೇ ನಡೆಯಬೇಕಿದ್ದ, ಐಪಿಎಲ್-2020 ಮುಂದಕ್ಕೆ ಹೋಗಿತ್ತು. ಭಾರತದಲ್ಲಿ ಕೊರೊನಾ ಹಿಡಿತಕ್ಕೆ ಸಿಗದ ಹಿನ್ನೆಲೆ ಸೋಂಕಿನ ಪ್ರಮಾಣ ಕಮ್ಮಿ ಇರುವ ಯುಎಇಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಅಂತೆಯೇ ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನವೇ ಐಪಿಎಲ್ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.