ಸಿಎಂ ಸ್ಥಾನ ಯಾರಿಗೂ ಫಿಕ್ಸ್ ಅಲ್ಲ ಸೋತವರು ಸಿಎಂ ಆಗಿದ್ದಾರೆ : ಶಿವಕುಮಾರ್

Public TV
2 Min Read
DKShivakumar 2

ಬೆಂಗಳೂರು: ಚುನಾವಣೆಗೆ ಸ್ಪರ್ಧಿಸುವ 224 ಜನರಲ್ಲಿ ಗೆಲ್ಲುವವರ ಜತೆಗೆ, ಸೋತವರು ಕೂಡ ಮುಖ್ಯಮಂತ್ರಿಯಾಗಿದ್ದನ್ನು ರಾಜ್ಯ ರಾಜಕೀಯದ ಇತಿಹಾಸದಲ್ಲಿ ನೋಡಿದ್ದೇವೆ. ದೇವರಾಜ ಅರಸು ಅವರು ಚುನಾವಣೆಯಲ್ಲಿ ಗೆದ್ದಿರಲಿಲ್ಲ, ಆದರೂ ಮುಖ್ಯಮಂತ್ರಿ ಆಗಲಿಲ್ಲವೇ? ರಾಮಕೃಷ್ಣ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ, ಆದರೂ ಮುಖ್ಯಮಂತ್ರಿ ಆಗಲಿಲ್ಲವೇ? ನೀವು (ಮಾಧ್ಯಮದವರು) ಕೂಡ ಟ್ರೈ ಮಾಡಿ, ಒಂದು ಚಾನ್ಸ್ ನೋಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚಟಾಕಿ ಹಾರಿಸಿದ್ದಾರೆ.

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಪರಮೇಶ್ವರ ಎಂದು ಜೈಕಾರ ಹಾಕಿದ್ದರ ಬಗ್ಗೆ ಮಾಧ್ಯಮದವರು ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಈ ರೀತಿ ಚಟಾಕಿ ಹಾರಿಸಿದರು.  ಇದನ್ನೂ ಓದಿ: ನನ್ನನ್ನು ಮುಂದಿನ ಸಿಎಂ ಎನ್ನಬೇಡಿ, ಆ ಪದವೇ ನನಗೆ ಡೇಂಜರ್ ಆಗುತ್ತೆ – ಪರಮೇಶ್ವರ್

parameshwar 1 medium

ಮೈಸೂರಿನ ಸುತ್ತೂರು ಶ್ರೀಗಳಿಗೆ ರಾಜಕೀಯ ಪಕ್ಷಗಳ ಬೇಧ-ಭಾವವಿಲ್ಲ. ಎಲ್ಲ ಪಕ್ಷಗಳ ನಾಯಕರಿಗೂ ಕಷ್ಟಕಾಲದಲ್ಲಿ ಧೈರ್ಯ ತುಂಬಿ, ಆಶೀರ್ವಾದ ಮಾಡುತ್ತಾರೆ. ಅವರ ಪೂರ್ವಾಶ್ರಮದ ಮಾತೃಶ್ರೀ ಅವರು ತೀರಿಕೊಂಡಾಗ ನಾವು ಹೋಗಲು ಸಾಧ್ಯವಾಗಲಿಲ್ಲ. ಆನಂತರ ನಾನು ಹೋಗಿ ಭೇಟಿ ಮಾಡಿದ್ದೇನೆ. ಅದೇ ರೀತಿ ಪರಮೇಶ್ವರ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎಂದರು.

R Ashok CM BSY medium

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದುರ್ಬಲವಾಗಿದೆ. ಹೀಗಾಗಿ ಪಕ್ಷದಲ್ಲಿ ನಾಯಕತ್ವದ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಸಚಿವ ಅಶೋಕ್ ಅವರು ನೀಡಿರುವ ಹೇಳಿಕೆಯ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಉತ್ತರಿಸಿದ ಶಿವಕುಮಾರ್ ಅವರು, ಅಶೋಕಣ್ಣ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ತೆಗೆದುಹಾಕಲಿ, ಆಮೇಲೆ ಬೇರೆಯವರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು. ಈ ವೇಳೆ ಅವರ ಪಕ್ಷದಲ್ಲಿ ಆದ ರಾಮಾಯಣ ನೀವೇ (ಮಾಧ್ಯಮ ದವರು) ತೋರಿಸಿದ್ದೀರಲ್ಲಾ ಎಂದೂ ಹೇಳಿದರು.

ಸಿಎಎ ಆಂದೋಲನ ಮತ್ತೆ ಆರಂಭವಾಗಬೇಕು ಎಂದು ಕೆಲವು ರಾಜಕೀಯ ಪಕ್ಷಗಳು ಹೇಳಿರುವ ಬಗ್ಗೆ ಪ್ರಸ್ತಾಪಿಸಿದಾಗ ಉತ್ತರಿಸಿದ ಅವರು, ಜನರ ಹಿತಾಸಕ್ತಿ, ಅವರ ಸಾರ್ವಭೌಮತ್ವ, ಪೌರತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಇವು ದೇಶದ ಪ್ರತಿ ಪ್ರಜೆಯ ಹಕ್ಕು. ಅವರ ರಕ್ಷಣೆಗೆ ನಾವು ಸದಾ ನಿಲ್ಲುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *