ಬೆಂಗಳೂರು: ಮುಂದಿನ ಮೂರು ವರ್ಷ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಸೀಟ್ ಖಾಲಿ ಇದ್ರೆ ಟವೆಲ್ ಹಾಕಬಹುದು ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪರೋಕ್ಷವಾಗಿ ಕಂದಾಯ ಸಚಿವ ಆರ್.ಆಶೋಕ್ ತಿರುಗೇಟು ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ. ಖಾಲಿ ಇಲ್ಲ ಅಂದ್ಮೇಲೆ ಟವೆಲ್ ಎಲ್ಲಿ ಹಾಕ್ತಾರೆ ಅವರು? ಖಾಲಿ ಇಲ್ಲದ ಸೀಟ್‍ಗೆ ಟವೆಲ್ ಹಾಕಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ. ಅವರ ನೇತೃತ್ವದಲ್ಲೇ ಸರ್ಕಾರ ಮೂರು ವರ್ಷ ಕೆಲಸ ಮಾಡುತ್ತೆ. ಆದ್ದರಿಂದ ಖಾಲಿ ಇಲ್ಲದ ಸೀಟ್‍ಗೆ ಟವೆಲ್ ಹಾಕೋದನ್ನು ಎಲ್ಲರೂ ನಿಲ್ಲಿಸಿದರೇ ಎಲ್ಲರಿಗೂ ಒಳ್ಳೆಯದು ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಬಿಎಸ್‍ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ: ಯತ್ನಾಳ್ ಹೊಸ ಬಾಂಬ್
ಆರ್.ಆರ್ ನಗರ ಕ್ಷೇತ್ರಕ್ಕೆ ಉಪಚುನಾವಣೆ ವಿಚಾರವಾಗಿ ಎಲ್ಲಾ ಉಸ್ತುವಾರಿ ಸಚಿವರಿಗೆ ನಮ್ಮ ನಿವಾಸದಲ್ಲಿ ಇಂದು ಸಭೆ ಕರೆದಿದ್ದೇವೆ. ಪ್ರತಿ ವಾರ್ಡಿಗೆ ಒಬ್ಬ ಸಚಿವರು, ಶಾಸಕರನ್ನು ನೇಮಕ ಮಾಡುತ್ತಿದ್ದೇವೆ. ಈಗಾಗಲೇ ಕಾಂಗ್ರೆಸ್ ಕಾರ್ಪೊರೇಟರ್ ಗಳು ನಮ್ಮೊಂದಿಗೆ ಸೇರಿದ್ದಾರೆ. ಜೆಡಿಎಸ್ ಕಾರ್ಪೊರೇಟರ್ ಗಳು ನಾಳೆ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷ ಸೇರುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರೇ ಇಲ್ಲದಂತೆ ಆಗಿದೆ. ಉತ್ತರ ಹಳ್ಳಿಯ ನಾಡಿ ಮಿಡಿತ ನನಗೆ ಗೊತ್ತಾಗಿದೆ. ಇಲ್ಲಿ ಕಾಂಗ್ರೆಸ್‍ನ ಯಾವ ಗಾಳಿ ಪ್ರಚಾರವಿಲ್ಲ, ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದರು.
ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಮುಗಿಸಿದ್ದೇ ಡಿಕೆ ಶಿವಕುಮಾರ್ ಅವರು. ಈ ಚುನಾವಣಾ ಪ್ರಚಾರ ನೋಡಿದರೆ ಜೆಡಿಎಸ್ ಮಾತ್ರ ಬಿಜೆಪಿಗೆ ಸ್ಪರ್ಧೆ ಇದೆ ಅನ್ನಿಸುತ್ತಿದೆ ಎಂದರು.