ಬೆಂಗಳೂರು: ಸಚಿವ ಸ್ಥಾನದ ಪಟ್ಟಿ ಫೈನಲ್ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೆಚ್ ವಿಶ್ವನಾಥ್, ಸತೀಶ್ ರೆಡ್ಡಿ ಹಾಗೂ ರೇಣುಕಾಚಾರ್ಯ ಬೆನ್ನಲ್ಲೇ ಇದೀಗ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ.
ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ.
ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯು ಈ ಮಾರ್ಗ ಹಿಡಿಯುವುದಿಲ್ಲ.
— Sunil Kumar Karkala (@karkalasunil) January 13, 2021
ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕರು, ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ. ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯೂ ಈ ಮಾರ್ಗ ಹಿಡಿಯುವುದಿಲ್ಲ ಎಂದು ಬರೆದುಕೊಳ್ಳುವ ಮೂಲಕ ಸಿ.ಪಿ ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ್ದಾರೆ.
ನಿನ್ನೆಯವರೆಗೆ ಸುನಿಲ್ ಕುಮಾರ್ ಹೆಸರು ಕೂಡ ಸಚಿವ ಸ್ಥಾನದ ಪಟ್ಟಿಯಲ್ಲಿ ಇರುವುದಾಗಿ ಕೇಳಿಬರುತ್ತಿತ್ತು. ಆದರೆ ಇದೀಗ ಅವರ ಹೆಸರನ್ನು ಕೂಡ ಕೈಬಿಡಲಾಗಿದೆ. ಈ ಬೆನ್ನಲ್ಲೇ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಸಿಎಂ, ಇಂದು 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ, ಅವರಿಗೆ ಕೂಡ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.