ವಿಜಯಪುರ: ಮುಖ್ಯಮಂತ್ರಿ ಲೀಸ್ಟ್ ನಲ್ಲಿ ನನ್ನ ಹೆಸರು ಏಕೆ ಇರಬಾರದು?. ನಾವು ಸಮರ್ಥರು, ಅರ್ಹರು ಇದ್ದೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದವರು ಸಮರ್ಥರಿದ್ದಾರೆ. ನಾನೇನು ಭೂ ಹಗರಣ, ಭ್ರಷ್ಟಾಚಾರ ಮಾಡಿಲ್ಲ. ಹಾಗಾಗಿ ನಾನು ಏಕೆ ಸಿಂ ಆಕಾಂಕ್ಷಿ ಆಗಬಾರದು ಎಂದು ಪ್ರಶ್ನಿಸಿದರು.
ರಾಜ್ಯ ರಾಜಕೀಯದಲ್ಲಿ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಏಪ್ರಿಲ್ 17ಕ್ಕೆ ಚುನಾವಣೆ ಮುಗಿಯಲಿ, 18ಕ್ಕೆ ಹೇಳ್ತೇನೆ. ಉಪ ಚುನಾವಣೆ ಮುಗಿದ ಬಳಿಕ ಎಲ್ಲವೂ ಹೇಳ್ತೇನೆ ಎಂದರು.
ಕೊರೊನಾ ಅಲೆ ವಿಚಾರ ಸಂಬಂಧ ಮಾತನಾಡಿ, ಎರಡನೇ ಅಲೆ ದಿಢೀರನೆ ಹರಡುತ್ತಿದೆ. ರಷ್ಯಾದಿಂದ ಸೇರಿದಂತೆ ವಿದೇಶದಿಂದ ಸರ್ಕಾರ ವ್ಯಾಕ್ಸಿನ್ ತರಿಸಿಕೊಳ್ತಿದೆ. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಬಳಸಿ. ಲಾಕ್‍ಡೌನ್ ಬಗ್ಗೆ ಸ್ಪಷ್ಟ ನಿರ್ಧಾರ ಪಿಎಂ, ಸಿಎಂ ತೆಗೆದುಕೊಳ್ಳಬೇಕು. ಉಪಚುನಾವಣೆಯಲ್ಲಿ ಸ್ವಲ್ಪ ಸಡಿಲಿಕೆ ಮಾಡಿ ಉಳಿದೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾತ್ರಿ ಕರ್ಫ್ಯೂ ವಿಚಾರದ ಕುರಿತು ಪ್ರತಿಕ್ರಿಯಿಸಿ, ವೈಜ್ಞಾನಿಕವಾಗಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಸಿಡಿ ಪ್ರಕರಣ ಸಂಬಂಧ ತನಿಖೆ ನಡೆದಿದೆ, ಇದರ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಕೃತ್ಯದಲ್ಲಿ ಯಾರು ಇದ್ದಾರೆ ಎಂಬುದು ಗೊತ್ತಿದೆ. ಅವರನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ, ಇದು ದುರ್ದೈವದ ಸಂಗತಿ ಎಂದರು.
ಉಪಚುನಾವಣೆ ವಿಚಾರದ ಕುರಿತು ಮಾತನಾಡಿ, ಬೆಳಗಾವಿಗೆ ಹೋಗಿ ಪ್ರಚಾರ ಮಾಡಿ ಬಂದಿದ್ದೇನೆ. ನಾನು ಹೋಗಿ ಬಂದ ಬಳಿಕ ಅಲ್ಲಿಯ ವಾತಾವರಣ ಬದಲಾಗಿದೆ, ಬಿಜೆಪಿ ಗೆಲುವು ಖಚಿತ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.