ರಾಯಚೂರು: ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ, ಆ ಜೆಟ್ ಪೈಲಟ್ ನಲ್ಲಿ ಕುಳಿತು ನಾವು ಪ್ರಯಾಣ ಮಾಡುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ರಾಯಚೂರಿನ ಮಸ್ಕಿಯ ವಟಗಲ್‍ನಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯ ಉದ್ಘಾಟನೆ ಬಳಿಕ ಮಾತನಾಡಿದ ಶ್ರೀರಾಮುಲು ನಮ್ಮ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ, ಕಲ್ಯಾಣ ಕರ್ನಾಟಕಕ್ಕೆ ಒತ್ತು ನೀಡುತ್ತಿದೆ. ಉಪ ಚುನಾವಣೆ ಬಳಿಕ ಮತ್ತಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಇಬ್ಬರು ಅಥವಾ ಮೂವರು ಮಂತ್ರಿಗಳಾಗುವ ಅವಕಾಶ ಇದೆ ಎಂದು ಹೇಳಿದರು.
ಈ ವೇಳೆ ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲೆಟ್ ಇದ್ದಂತೆ. ಆ ಜೆಟ್ ಪೈಲಟ್ ನಲ್ಲಿ ಕುಳಿತು ನಾವು ಪ್ರಯಾಣ ಮಾಡುತ್ತಿದ್ದೇವೆ. ಜೆಟ್ ಎಷ್ಟು ವೇಗವಾಗಿ ಹೋಗುತ್ತೋ ಅದೇ ಮಾದರಿಯಲ್ಲಿ ಬಿಜೆಪಿ ಸರ್ಕಾರ ನಡೆದಿದೆ ಎಂದು ಹೇಳುವ ಮೂಲಕ ರಾಜ್ಯದ ಬಿಎಸ್ ವೈ ಸರ್ಕಾರ ಡಕೋಟಾ ಬಸ್ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಕುರುಬರು ಹಾಗೂ ಪಂಚಮಸಾಲಿಯವರು ಹೋರಾಟ ನಡೆಸಿದ್ದಾರೆ. ಎರಡು ಸಮಾಜದ ಗುರುಗಳ ಪಾದಯಾತ್ರೆ ನಾನು ನೋಡಿದ್ದೇನೆ. ಕುರುಬರಿಗೆ ಎಸ್ ಟಿ ಸೇರಿಸಲು ಕೆಲವು ಕಾನೂನು ತೊಡಕುಗಳು ಇವೆ. ಕುಲಶಾಸ್ತ್ರ ಅಧ್ಯಯನ ನಡೆಯಬೇಕಿದೆ. ಅಧ್ಯಯನದ ಬಳಿಕ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುತ್ತೆ. ಪಂಚಮ ಸಾಲಿಗೆ 2 ಎ ನೀಡುವ ವಿಚಾರದ ಬಗ್ಗೆ ಸಿಎಂ ಬಿಎಸ್ ವೈ ಈಗಾಗಲೇ ಅಧ್ಯಯನಕ್ಕಾಗಿ ಆದೇಶ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನದ ವರದಿ ಬರಲಿ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಇದಕ್ಕೂ ಮುನ್ನ ನಡೆದ ಇಂದಿರಾ ಗಾಂಧಿ ವಸತಿ ಶಾಲೆಯ ಉದ್ಘಾಟನಾ ಸಮಾರಂಭದ ವೇದಿಕೆ ಸರ್ಕಾರಿ ಕಾರ್ಯಕ್ರಮದ ಬದಲು ರಾಜಕೀಯ ಮತ ಪ್ರಚಾರ ವೇದಿಕೆಯಾಗಿ ಮಾರ್ಪಟ್ಟಿತ್ತು. ಸಚಿವ ಶ್ರೀರಾಮುಲು, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮುಂಬರುವ ಮಸ್ಕಿ ಉಪಚುನಾವಣೆಗೆ ಈಗಾಗಲೇ ಮತಯಾಚನೆ ಮಾಡಿದರು. ಮಸ್ಕಿ ಉಪಚುನಾವಣೆ ಬಿಜೆಪಿ ಉಸ್ತುವಾರಿಯಾಗಿರುವ ಶ್ರೀರಾಮುಲು, ಪ್ರತಾಪ್ ಗೌಡರಿಂದ ನಾನು ಸಚಿವನಾಗಿದ್ದೇನೆ ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶಾಸಕ ಪ್ರತಾಪ್ ಗೌಡ ಪಾಟೀಲ್ ತಮ್ಮ ಸಾಧನೆಗಳನ್ನ ಹೇಳಿ ಮತಯಾಚನೆ ಮಾಡಿದರು.