– ಇದಕ್ಕೆ 1,700 ಕೋಟಿ ರೂ. ನೀಡಿ 17 ಶಾಸಕರನ್ನು ಖರೀದಿಸುವ ಅವಶ್ಯವೇನಿತ್ತು?
– ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು, ಅಧಿಕಾರ ನಡೆಸುವುದಕ್ಕಲ್ಲ
ಶಿವಮೊಗ್ಗ: ಜನ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು. ಅವರಿಗೆ ಅಧಿಕಾರ ನಡೆಸಲು ಬರುವುದಿಲ್ಲ. ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಜನರು ಬೀದಿ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಹೀಗಿದ್ದರೂ ಕೊರೊನಾ ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಸಚಿವರು ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇಂತಹದ್ದಕ್ಕೆ 1,700 ಕೋಟಿ ರೂ. ಖರ್ಚು ಮಾಡಿ 17 ಶಾಸಕರನ್ನು ಖರೀದಿ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದರು.