ಮೈಸೂರು: ನಂಜನಗೂಡು ಟಿಹೆಚ್‍ಒ ಆತ್ಮಹತ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಮೈಸೂರಿನಲ್ಲಿ ವೈದ್ಯಾಧಿಕಾರಿಗಳು ನಡೆಸುತ್ತಿದ್ದ ಪ್ರತಿಭಟನೆ ಸಿಎಂ ಮನವೊಲಿಕೆ ಹಿನ್ನೆಲೆ ವೈದ್ಯರ ಸಂಘ ಮುಷ್ಕರ ಹಿಂಪಡೆದಿದೆ. ಈ ಬಗ್ಗೆ ಸಂಘದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ವೈದ್ಯರ ಕುರಿತ ಸಚಿವ ಡಾ. ಸುಧಾಕರ್ ಹೇಳಿಕೆ ಖಂಡಿಸಿದ ಅವರು ಸರ್ಕಾರದ ಮುಂದೆ ಹಲವು ಷರತ್ತು ಇಟ್ಟಿದ್ದಾರೆ. ಸಿಇಓ ಪ್ರಶಾಂತ್ ಮಿಶ್ರಾ ವಿಚಾರದಲ್ಲಿ ಹೇಗೆ ಸರ್ಕಾರ ವಿಚಾರಣೆ ಮುಗಿಯುವರೆಗೂ ಅಮಾನತ್ತು ಇಲ್ಲ ಎಂಬುದಕ್ಕೆ ಬದ್ಧವಾಗಿದೆಯೋ. ಅದು ಎಲ್ಲಾ ಸರಕಾರಿ ವೈದ್ಯರಿಗೂ ಅನ್ವಯವಾಗಬೇಕು.
ಆರೋಗ್ಯ ಇಲಾಖೆ ಅಧಿಕಾರಿಗಳೇ ನಮಗೆ ನೋಡಲ್ ಅಧಿಕಾರಿಗಳಾಗಬೇಕು. ಕೆಎಎಸ್, ಐಎಎಸ್ ಅಧಿಕಾರಿಗಳು ಕೊರೊನಾ ನೊಡಲ್ ಆಫಿಸರ್ ಆಗುವುದು ಬೇಡ. ಗುತ್ತಿಗೆ ಆಧಾರದ ಮೇಲೆ ಅರೆಕಾಲಿಕ ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರೂಪ್ ಡಿ ನೌಕರರನ್ನ ನೇಮಕ ಮಾಡಿಕೊಳ್ಳಬೇಕು ಎಂಬ ಷರತ್ತುಗಳನ್ನು ಸರ್ಕಾರದ ಮುಂದೆ ಇರಿಸಿದ್ದಾರೆ. ಪ್ರಕರಣ ವರದಿ ಬರೋವರೆಗು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ವೈದ್ಯರ ಸಂಘ ನಿರ್ಧರಿಸಿದೆ.
ಸಚಿವ ಸುಧಾಕರ ಹೇಳಿದ್ದೇನು?: ಮಂತ್ರಿಯಾಗಿ ನಾನೇ ಇಷ್ಟು ಟೆಸ್ಟ್ ಮಾಡಿ ಅಂತ ಡಿಸಿ ಹಾಗೂ ಸಿಇಒಗಳಿಗೆ ಟಾರ್ಗೆಟ್ ಕೊಡುತ್ತೇನಿ. ಯಾರನ್ನ ಅಮಾನತು ಮಾಡಬೇಕು. ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡೋವರು ಸರ್ಕಾರದಲ್ಲಿರಬೇಕು. ಇಲ್ಲ ಅಂದ್ರೆ ಅವರು ಸ್ವತಂತ್ರರಿದ್ದಾರೆ. ಖಾಸಗಿಯಲ್ಲಿ ಕೆಲಸ ಮಾಡಲಿ. ಎಲ್ಲದಕ್ಕೂ ಲಿಮಿಟ್ ಇದೆ ಅಂತ ಪ್ರತಿಭಟನಾ ನಿರತ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ನಾಗೇಂದ್ರ ಅವರ ಕುಟುಂಬವೇ ಸರ್ಕಾರದ ತೀರ್ಮಾನಕ್ಕೆ ಒಪ್ಪಿದೆ. ಕಾರ್ಯವೈಖರಿಗೆ ಹೊಗಳಿದೆ. ಆದರೆ ಕೆಲವರು ಅಮಾಯಕರನ್ನು ಕೂರಿಸ್ಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಪರದೆ ಹಿಂದೆ ಪ್ರೇರೇಪಣೆ ಕೊಡಬೇಡಿ. ಗಣೇಶ ಅವರಿಗೆ ಸದ್ಬುದ್ಧಿ ಕೊಡ್ಲಿ ಅಂತ ಪ್ರತಿಭಟನಾನಿರತ ವೈದ್ಯರ ವಿರುದ್ಧ ಸಚಿವ ಸುಧಾಕರ್ ಕಿಡಿಕಾರಿದ್ದರು. ಹೇಳಿಕೆಗೂ ಇದಕ್ಕೂ ಮುನ್ನ ಟ್ವೀಟ್ ಮಾಡಿ, ನಾಗೇಂದ್ರ ಅವರ ಸಾವಿನ ವಿಷಯದಲ್ಲಿ ಸರ್ಕಾರಕ್ಕೆ ಯಾರನ್ನೂ ರಕ್ಷಿಸುವ ಇಚ್ಛೆಯಿಲ್ಲ. ಯಾರೇ ತಪ್ಪು ಮಾಡಿದರೂ ಅದಕ್ಕೆ ಕ್ಷಮೆಯಿಲ್ಲ. ಪ್ರತಿಭಟಿಸುವುದನ್ನು ನಿಲ್ಲಿಸಿ. ಜನ ಸೇವೆಯೇ ಜನಾರ್ಧನ ಸೇವೆ. ತನಿಖೆಯ ನಂತರ ಸತ್ಯ ತಿಳಿದೇ ತಿಳಿಯುತ್ತೆ ಅಂದಿದ್ದರು.