ಬೆಂಗಳೂರು: ವಿಜಯಪುರ ಜಿಲ್ಲೆಯ 40ಕ್ಕೂ ಹೆಚ್ಚು ಲಿಂಗಾಯತ ಸ್ವಾಮೀಜಿಗಳು ಸಿಎಂ ಭೇಟಿ ಮಾಡಿ, ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ ಕೊಡುವಂತೆ ಒತ್ತಡ ಹಾಕಿದ್ದಾರೆ.
ಲಿಂಗಾಯತರಲ್ಲಿ ಒಟ್ಟು 106 ಒಳಪಂಗಡಗಳಿದ್ದು, ಇದರಲ್ಲಿ 32 ಒಳಪಂಗಡಗಳು ಮಾತ್ರ ಒಬಿಸಿ ವ್ಯಾಪ್ತಿಗೆ ಬರುತ್ತವೆ. ಉಳಿದ ಉಳಿದ 74 ಒಳಪಂಗಡಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದರು. ಅಲ್ಲದೇ ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ, ಪರಿಶೀಲನೆ ನಡೆಸೋದಾಗಿ ತಿಳಿಸಿದರು.
ಮೀಸಲಾತಿ ವಿಚಾರದಲ್ಲಿ ಯಾವುದೇ ಆತುರದ ನಿರ್ಣಯ ಕೈಗೊಳ್ಳದಂತೆ ಸಿಎಂ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಮೀಸಲಾತಿ ವಿಚಾರಗಳು ತುಂಬಾನೆ ಸೂಕ್ಷ್ಮ. ಈ ವಿಚಾರದಲ್ಲಿ ಯಾವುದೇ ತುರ್ತು ನಿರ್ಣಯ ಕೈಗೊಳ್ಳಬಾರದು. ಮೊದಲು ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಿ, ನಂತರ ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.