ಬೆಂಗಳೂರು: ಕರ್ನಾಟಕಕ್ಕೆ ಇದು ನಿಜಕ್ಕೂ ಸಂಕಷ್ಟ ಕಾಲ. ಅಧಿಕಾರ ಪಲ್ಲಟವಾಗಿ ಮೂರು ದಿನ ಕಳೆದಿದೆ. ಆದರೆ ಸಂಪುಟವೇ ರಚನೆ ಆಗಿಲ್ಲ. ಸದ್ಯ ಬೊಮ್ಮಾಯಿ ಅವ್ರದ್ದು ಏಕವ್ಯಕ್ತಿ ಸರ್ಕಾರವಾಗಿ ಮಾರ್ಪಟ್ಟಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ರೂ, ಅದು ಅಭಿನಂದನೆ, ಶುಭಾಶಯಗಳ ವಿನಿಮಯಕ್ಕೆ ಸೀಮಿತವಾಯ್ತೆ ವಿನಾಃ, ಸಂಪುಟ ರಚನೆಗೆ ಇನ್ನೂ ವರ ಸಿಕ್ಕಿಲ್ಲ. ರಾಜ್ಯದಲ್ಲಿ ಅತಿವೃಷ್ಠಿ, ಪ್ರವಾಹ, ಕೋವಿಡ್ 3ನೇ ಅಲೆಯ ಆತಂಕದ ಮಧ್ಯೆ 21 ಸಂಭಾವ್ಯ ಸಚಿವರ ಪಟ್ಟಿಗೆ ಒಪ್ಪಿಗೆ ನೀಡಲು ಮನವಿ ಸಲ್ಲಿಸಿದ್ರೂ, ಸದ್ಯಕ್ಕೆ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಈ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಿಎಂ ಮಾತನಾಡಿದ್ರು.
ಇಂದು ರಾತ್ರಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಂಭಾವ್ಯ ಸಚಿವರ ಪಟ್ಟಿಗೆ ಅನುಮೋದನೆ ನೀಡುವ ಸಂಭವ ಇದೆ. ಒಂದು ವಾರದಲ್ಲಿ ಸಂಪುಟ ರಚನೆ ಆಗಲಿದೆ ಅಂತಾ ಬೊಮ್ಮಾಯಿ ತಿಳಿಸಿದ್ರು. ಒಂದು ವೇಳೆ ಮೊದಲ ಹಂತದ ಸಂಪುಟ ರಚನೆಗೆ ಹೈಕಮಾಂಡ್ ತಕ್ಷಣ ಒಪ್ಪಿಗೆ ಕೊಡದಿದ್ರೇ ಇನ್ನೊಂದು ವಾರ ಬೊಮ್ಮಾಯಿ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
ಆಪರೇಷನ್ ಕಮಲ ನಡೆಸಿ ಯಡಿಯೂರಪ್ಪ ಸರ್ಕಾರ ರಚಿಸಿದಾಗಲೂ ಸರಿಸುಮಾರು 2 ತಿಂಗಳು ಸಂಪುಟ ರಚನೆಗೆ ಹೈಕಮಾಂಡ್ ಅವಕಾಶ ಕೊಡದೇ ಸತಾಯಿಸಿತ್ತು. ಆಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿದ್ದ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ್ರು. ಈಗ ಬೊಮ್ಮಾಯಿಗೂ ಅಂಥಾದ್ದೇ ಪರಿಸ್ಥಿತಿ ಎದುರಾದ್ರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿವೆ.
ಒಂಟಿ ಸರ್ಕಾರದ ಮುಂದೆ ಅತಿವೃಷ್ಠಿ, ಪ್ರವಾಹ, ಕೋವಿಡ್ ಕೇಸ್ ಹೆಚ್ಚಳ, ವ್ಯಾಕ್ಸಿನೇಷನ್ ಕುಂಠಿತ, ಶಾಲೆ ಓಪನ್ ಗೊಂದಲ, ನಿಂತ ಅಭಿವೃದ್ಧಿ ಕಾರ್ಯ, ಅಧಿಕಾರಿಗಳ ದರ್ಬಾರ್ ಹೀಗೆ ಸಮಸ್ಯೆಗಳ ರಾಶಿಯೇ ಇದೆ. ಇದನ್ನೂ ಓದಿ: ಕೇರಳದಲ್ಲಿ ಇಂದು ಕೂಡ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ನಾಳೆ ಸಿಎಂ ಸಭೆ