ರಾಯಚೂರು: ಜಿಲ್ಲೆಯ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದಿದ್ದ ಆಪರೇಷನ್ ಕಮಲ ಚರ್ಚೆಯ ಕುರಿತ ಮುಖ್ಯಮಂತ್ರಿ ಯಡಿಯೂರಪ್ಪ ಆಡಿಯೋ ಪ್ರಕರಣಕ್ಕೆ ಮರುಜೀವ ಬಂದಿದೆ. ರಾಯಚೂರಿನ ಡಿವೈಎಸ್‍ಪಿ ಕಚೇರಿಯಲ್ಲಿ ಇಂದು ದೂರುದಾರ ಶರಣೇಗೌಡ ಕಂದಕೂರ ವಿಚಾರಣೆ ನಡೆಯಲಿದೆ.
ಆಪರೇಷನ್ ಕಮಲ ಕುರಿತ ಆಡಿಯೋ ಪ್ರಕರಣದ ತನಿಖೆ ವಿಚಾರಣೆಗೆ ಯಡಿಯೂರಪ್ಪ ಸ್ಟೇ ಹೋಗಿದ್ದರು, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ತಡೆಗೆ ಸಲ್ಲಿಸಿದ್ದ ಅರ್ಜಿ ವಜಾ ಹಿನ್ನೆಲೆ ತನಿಖೆ ಆರಂಭವಾಗಿದೆ. ರಾಯಚೂರು ಡಿವೈಎಸ್‍ಪಿ ಶಿವನಗೌಡ ಪಾಟೀಲ್ ತನಿಖೆ ಆರಂಭಿಸಿದ್ದು ದೂರುದಾರರ ವಿಚಾರಣೆಗೆ ಮುಂದಾಗಿದ್ದಾರೆ.
ಯಾದಗಿರಿಯ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣೇಗೌಡ ಆಡಿಯೋ ಪ್ರಕರಣ ಕುರಿತು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಕಲಬುರಗಿ ಉಚ್ಚನ್ಯಾಯಾಲಯದಲ್ಲಿದ್ದ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಮೂರು ನೋಟಿಸ್ ಬಳಿಕ ದೂರುದಾರ ಶರಣೇಗೌಡ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಸಂಜೆ 4 ಕ್ಕೆ ಡಿವೈಎಸ್‍ಪಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.