ಚಿಕ್ಕಮಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಹೋರಾಟ, ಹುದ್ದೆ, ವಯಸ್ಸು, ನಡೆದು ಬಂದ ದಾರಿಗೆ ಬೆಲೆ ಕೊಡಬೇಕು ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ. ಪಿ.ಕುಮಾರಸ್ವಾಮಿ ಬಿಎಸ್‌ವೈ ಪರ ಬ್ಯಾಟ್ ಬೀಸಿದ್ದಾರೆ.
ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಸಾಮಾಜಿಕ ನ್ಯಾಯ ಕಡಿಮೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಸರಿಪಡಿಸಿದರೆ ಪಕ್ಷ ಸೇರಿದಂತೆ ಎಲ್ಲರಿಗೂ ಒಳ್ಳೆಯದು. ಸರಿಪಡಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಬಹಳ ಜನ ಮಂತ್ರಿ ಆಗಿಲ್ಲ. ಅವಕಾಶ ಸಿಕ್ಕಿಲ್ಲ. ಆ ನೋವು ಎಲ್ಲರಿಗೂ ಇದೆ. ಹಾಗಂತ ಖಾಸಗಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾಯಕರ ಬಗ್ಗೆ ಮಾತನಾಡಿದರೆ ಪಕ್ಷದ ಬಗ್ಗೆ ಮಾತನಾಡಿದಂತೆ ಅದು ಕಾರ್ಯಕರ್ತರಿಂದ ಹಿಡಿದು ಶಾಸಕರು, ಸಂಸದರು, ಮಂತ್ರಿಗಳು ಎಲ್ಲರಿಗೂ ಡ್ಯಾಮೇಜ್ ಆಗುತ್ತೆ ಅದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
ನಮ್ಮ ಪಕ್ಷದ ನಾಯಕರೇ ಸಿಡಿ ಬಗ್ಗೆ ಮಾತನಾಡುತ್ತಿದ್ದಾರೆ. ನಾಯಕರು ಸಿಡಿ ವಿಚಾರ ಮಾತನಾಡುವುದನ್ನ ಕೂಡಲೇ ನಿಲ್ಲಿಸಬೇಕು. ಖಾಸಗಿ ವಿಚಾರದಲ್ಲಿ ಹಿರಿಯ ನಾಯಕರು ಸಿಡಿ ಅದು-ಇದು ಅಂತ ಮಾತನಾಡುತ್ತಾರೆ ಕೂಡಲೇ ಅದನ್ನ ನಿಲ್ಲಿಸಬೇಕು. ಈ ರೀತಿ ಖಾಸಗಿ ವಿಚಾರದಲ್ಲಿ ರಾಜಕೀಯ ಮಾಡುವುದು ಯಾರಿಗೂ ಸರಿಯಲ್ಲ. ಪಕ್ಷದ ವರಿಷ್ಠರು ಅದಕ್ಕೆ ನಿರ್ಬಂಧ ಹೇರಬೇಕು ಎಂದಿದ್ದಾರೆ.
ಶಾಸಕ ಕುಮಾರಸ್ವಾಮಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸರ್ಕಾರ ರಚನೆಯಾದಾಗಿನಿಂದ ಮೂರು ಬಾರಿಯೂ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಸಚಿವ ಸ್ಥಾನ ಸಿಕ್ಕಿರಲಿಲ್ಲ. ಮೊದಲ ಬಾರಿ ಸಚಿವರ ಪ್ರಮಾಣ ವಚನಕ್ಕೂ ಗೈರಾಗಿದ್ದರು. ಮೂರನೇ ಬಾರಿಯೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಮಧ್ಯೆಯೂ ಸಿಎಂ ಪರ ಬ್ಯಾಟ್ ಬೀಸಿರೋದು ಕುತೂಹಲ ಮೂಡಿಸಿದೆ.