ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ. ಅದಕ್ಕೆ ನಾವು ಬದ್ಧ ಎಂದು ಸಚಿವ ಎಸ್ ಅಂಗಾರ ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ರಾಷ್ಟ್ರೀಯ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಮೇಲೆ ನಿರ್ಧಾರ ಮಾಡಲಾಗುತ್ತದೆ. ರಾಷ್ಟ್ರೀಯ ನಾಯಕರ ಸಂದೇಶ ಬಂದ ನಂತರ ಬಿಎಸ್‍ವೈ ಆ ಕುರಿತು ತಮ್ಮ ನಿರ್ಧಾರ ಪ್ರಕಟಿಸುತ್ತಾರೆ ಎಂದರು. ಇದನ್ನೂ ಓದಿ: ಭಾರೀ ಚರ್ಚೆಗೆ ಗ್ರಾಸವಾಗಿದೆ ಬಿಎಸ್‍ವೈ ಮನೆಯಲ್ಲಿ ಸ್ವಾಮೀಜಿಗಳಿಗೆ ನೀಡಿದ್ದ ಕವರ್..!
ನಾಯಕತ್ವ ಬದಲಾವಣೆ ಅಭ್ಯಂತರದ ಪ್ರಶ್ನೆಯೇ ಬರುವುದಿಲ್ಲ. ಈಗಾಗಲೇ ಚರ್ಚೆ ನಡೆದಿದ್ದರು ಕೂಡ ನಾವು ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪಕ್ಷದ ತೀರ್ಮಾನ ಇರುತ್ತದೆ ಅದಕ್ಕೆ ನಾವೆಲ್ಲ ಬದ್ಧ. ಈ ಕುರಿತು ನಾನು ಮಾತಾಡೋಕೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಸಿಎಂ ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಇತ್ತ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಎಸ್‍ವೈ, ಜುಲೈ 25ರ ನಂತರ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವುದರ ಕುರಿತು ಸುಳಿವು ನೀಡಿದ್ದಾರೆ.
ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಜುಲೈ 25ರ ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದೇನೆ. ನನ್ನ ಕೆಲಸ ಮೆಚ್ಚಿ ವರಿಷ್ಠರು 75 ವರ್ಷ ಆದ ಬಳಿಕ 78 ರವರೆಗೂ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಪಕ್ಷ ಮತ್ತೆ ಅಧಿಕಾರಕ್ಕೆ ತರೋದು ನನ್ನ ಸಂಕಲ್ಪ. 26 ಕ್ಕೆ ಸರ್ಕಾರದ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ಕಾರ್ಯಕ್ರಮ ಬಳಿಕ ವರಿಷ್ಠರ ಸೂಚನೆಯಂತೆ ನಡ್ಕೋತೇನೆ. ವರಿಷ್ಠರ ತೀರ್ಮಾನವೇ ನನ್ನ ತೀರ್ಮಾನ ಎಂದು ಬಿಎಸ್‍ವೈ ತಿಳಿಸಿದರು.