– ಹೈಕಮಾಂಡ್‍ಗೆ ಬಿಜೆಪಿ ಶಾಸಕರಿಂದಲೇ ಪತ್ರ
– ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ದಾಖಲೆ ಬಿಡುಗಡೆ
ಮೈಸೂರು: ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ರೂ. ಲಂಚ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ಈ ಕುರಿತ ಪತ್ರವೊಂದನ್ನು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಬಿಡುಗಡೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದ ಶಾಸಕರು ಹೈಕಮಾಂಡ್‍ಗೆ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ಕ್ಲೀಪಿಂಗ್‍ಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ 20 ದಿನಗಳ ಸಮಯ ನೀಡುತ್ತಿದ್ದೇವೆ. ಯಾವುದೇ ಕ್ರಮಕೈಗೊಳ್ಳದಿದ್ದಾರೆ ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದಾರೆ.
ಸದ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪತ್ರವೂ ಬಿಜೆಪಿ ಶಾಸಕರೇ ಹೈಕಮಾಂಡ್‍ಗೆ ಬರೆದಿದ್ದು, 7 ಶಾಸಕರು ಪತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. 32 ಜನರ ಕೂಟವನ್ನು ವಿಜಯೇಂದ್ರ ಮಾಡಿಕೊಂಡಿದ್ದು, ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ. 32 ಜನರ ಕೂಟದ ವಿವರ ಹಾಗೂ ಫೋಟೋ ಸಮೇತ ಪತ್ರದಲ್ಲಿ ವಿವರಣೆಯನ್ನು ಪತ್ರದಲ್ಲಿ ನೀಡಲಾಗಿದೆ. ಅವರ ಅಕ್ರಮ ಆಸ್ತಿ, ಹೂಡಿಕೆ ಬಗ್ಗೆಯೂ ಮಾಹಿತಿ ಲಭಿಸಿದೆ ಎಂದು ಆರೋಪಿಸಿದ್ದಾರೆ. ಪತ್ರದಲ್ಲಿ ವಿಜಯೇಂದ್ರ ಕುರಿತು ಗಂಭೀರ ಆರೋಪ ಕೇಳಿ ಬಂದಿದ್ದು, ಈ ಪತ್ರ ತನಿಖೆಗೆ ಒಳಪಡಿಸಬೇಕು. ಸರ್ಕಾರ ಈ ಬಗ್ಗೆ ತನಿಖೆ ನಡೆಸದಿದ್ದರೆ ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಪತ್ರದ ಕುರಿತು ವಿವರಣೆಯನ್ನು ನೀಡಿದ ಲಕ್ಷ್ಮಣ್ ಅವರು, 31 ಜನರ ಕೂಟವನ್ನು ವಿಜಯೇಂದ್ರ ಅವರು ಮಾಡಿಕೊಂಡಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರದ ನೌಕರರ ವರ್ಗಾವಣೆ ದಂಧೆ ನಡೆಸಲು ಷಡಕ್ಷರಿ ಅವರು ನೋಡಿಕೊಳ್ಳುತ್ತಾರೆ. ಇವರ ಕಚೇರಿ ರಾಜ್ಯ ಸರ್ಕಾರಿ ನೌಕರರ ಕಚೇರಿ ಕಬ್ಬನ್ ಪರ್ಕ್ ಯಲ್ಲಿದೆ. 2ನೇ ಅವರು ಉಮೇಶ್ ಜಲಸಂಪನ್ಮೂಲ ಮತ್ತು ಪಿಡಬ್ಲೂಡಿ ಇಲಾಖೆಯ ಟೆಂಡರ್ ನಿರ್ವಹಣೆ. ಇವರು ಗುತ್ತಿಗೆದಾರರ ಆಯ್ಕೆ, ಕಮಿಷನ್ ಸಾಗಣೆ, ಕಪ್ಪು ಹಣ ನಿರ್ವಹಣೆ ಹಾಗೂ ಎಲ್ಲಾ ಇಲಾಖೆಗಳಲ್ಲಿ ಮಾಸಿಕ ಕಂತು ವಸೂಲಿ ಮಾಡುವ ಕೆಲಸ ಮಾಡುತ್ತಾರೆ. 3ನೇ ಅವರು ರಾಜಪ್ಪ, ಅಬಕಾರಿ ಮತ್ತು ಶಿಕ್ಷಣ ಇಲಾಖೆ ವರ್ಗಾವಣೆ, ನೇಮಕಾತಿ ದಂಧೆ, ಮುಖ್ಯಮಂತ್ರಿ ಹಾಗೂ ಸೂಪರ್ ಸಿಎಂ ನಡುವೆ ಸಮನ್ವಯ ನೋಡಿಕೊಳ್ಳುವುದು, ವಿಜಯೇಂದ್ರ ಅವರ ಆದೇಶಗಳನ್ನು ವಿಧಾನಸೌಧದಲ್ಲಿ ಅನುಷ್ಠಾನ ಮಾಡುವುದು ಹೀಗೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.