– ಕಾರ್ಯಕ್ರಮ ರದ್ದುಗೊಳಿಸಿ ಮನೆಯಲ್ಲೇ ಉಳಿದ ಸಿಎಂ
ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೆ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಭೀತಿ ಶುರುವಾಗಿದೆ.
ತಮ್ಮ ಕಚೇರಿಯಲ್ಲೇ ಸೋಂಕು ಕಾಣಿಸಿಕೊಂಡ ಕಾರಣ ಸಿಎಂ ಬಿಎಸ್‍ವೈ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ಮನೆಯಲ್ಲೇ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಿವೃತ್ತಿ ಹೊಂದಿರುವ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮಲ್ಲಿ ಸಿಎಂ ಗೈರು ಹಾಜರಾಗಲಿದ್ದಾರೆ. ಇಂದು ಇಡೀ ದಿನ ಸಿಎಂ ತಮ್ಮ ಕಾವೇರಿ ನಿವಾಸದಲ್ಲೇ ಇರಲಿದ್ದಾರೆ.
ಸದ್ಯ ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದಲೂ ಮೂರೂ ನಿವಾಸಗಳಲ್ಲಿರುವ ಸಿಬ್ಬಂದಿಗೆ ಸೋಂಕು ಪಾಸಿಟಿವ್ ಪತ್ತೆ ಆಗುತ್ತಿದ್ದು, ಸಿಎಂಗೆ ಕೊರೊನಾಂತಕ ಎದುರಾಗಿದೆ. ಈ ನಡುವೆ ಸಿಎಂ ಸಚಿವಾಲಯದಿಂದ ಮಾಹಿತಿ ಮುಚ್ಚಿಡುವ ಪ್ರಯತ್ನ ನಡೆಯುತ್ತಿದ್ಯಾ? ಎಂಬ ಅನುಮಾನಗಳು ಮೂಡಿವೆ.
ಸಿಎಂ ಕಾರು ಚಾಲಕನಿಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಧವಳಗಿರಿ ನಿವಾಸದ ಅಡುಗೆ ನೌಕರನಿಗೂ ಸೋಂಕು ಇರುವುದು ದೃಢಪಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಲವು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಕೃಷ್ಣಾದಲ್ಲಿ ಹಲವು ಸಭೆಗಳು ನಡೆದಿವೆ. ಸೆಂಟ್ರಲ್ ಟೀಂ ಜತೆ ಸಿಎಂ ಕಳೆದ ಮಂಗಳವಾರ ಸಭೆ ನಡೆಸಿದ್ದಾರೆ. ಸಾಕಷ್ಟು ಸಚಿವರು, ಶಾಸಕರು, ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಇಷ್ಟದರೂ ಈ ಮಾಹಿತಿಯನ್ನು ಸಚಿವಾಲಯ ಮುಚ್ಚಿಟ್ಟಿದ್ದು, ಯಾಕೆ ಎಂಬ ಪ್ರಶ್ನೆ ಎದ್ದಿದೆ.