ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ-2021 ಪರೀಕ್ಷೆ ಬರೆಯಲು ಆನ್‍ಲೈನ್ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 16ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಿಸಿಎಂ ಅವರು, ಅರ್ಜಿ ಸಲ್ಲಿಕೆಯ ಜೊತೆಗೆ ಶುಲ್ಕ ಪಾವತಿಯನ್ನು ಜುಲೈ 19ರವರೆಗೂ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಇಟಿ ವಿದ್ಯಾರ್ಥಿಗಳಿಗೆ ಕೋವಿಡ್ ರಕ್ಷಕ-ಪರೀಕ್ಷಾ ಪ್ರಾಧಿಕಾರಕ್ಕೆ 2 ಲಕ್ಷ ಸರ್ಜಿಕಲ್ ಮಾಸ್ಕ್ – ಡಿಸಿಎಂಗೆ ಹಸ್ತಾಂತರ
ಪೋಷಕರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಜುಲೈ 14ರಿಂದ 20ರವರೆಗೆ ಅವಕಾಶ ನೀಡಲಾಗಿದೆ. ಎನ್‍ಸಿಸಿ, ಕ್ರೀಡೆ, ರಕ್ಷಣೆ, ರಕ್ಷಣೆ (ನಿವೃತ್ತ), ಸ್ಕೌಟ್ಸ್ ಮತ್ತು ಗೈಡ್ಸ್ ವರ್ಗಗಳನ್ನು ಕ್ಲೇಮ್ ಮಾಡುವ ಅಭ್ಯರ್ಥಿಗಳು ನಿಗದಿಪಡಿಸಿರುವ ತಮಗೆ ಹತ್ತಿರವಾದ ಯಾವುದಾದರೂ ಕೇಂದ್ರಕ್ಕೆ ತೆರಳಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ http://kea.kar.nic.in ವೆಬ್‍ತಾಣಕ್ಕೆ ಭೇಟಿ ನೀಡಿ ವಿವರ ಪಡೆಯಬಹುದು ಎಂದು ಡಿಸಿಎಂ ತಿಳಿಸಿದ್ದಾರೆ.