ರಾಯಚೂರು: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ವತಿಯಿಂದ ನಡೆಯುತ್ತಿರುವ ಜ್ಞಾನದೀವಿಗೆ ಅಭಿಯಾನದ ಅಡಿ ಜಿಲ್ಲೆಯ ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂದು ಟ್ಯಾಬ್‍ಗಳನ್ನು ವಿತರಿಸಲಾಯಿತು. ಹೆಡಗಿನಾಳ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 14 ಜನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 7 ಉಚಿತ ಟ್ಯಾಬ್‍ಗಳನ್ನು ವಿತರಿಸಲಾಯಿತು.
ಶಾಲೆಯ ಮೊದಲ ಬ್ಯಾಚ್‍ನ ವಿದ್ಯಾರ್ಥಿಗಳು ಟ್ಯಾಬ್‍ಗಳನ್ನು ಪಡೆದಿದ್ದಾರೆ. ಆದರೆ ಶಾಲೆಗೆ ಇನ್ನೂ ಮೂಲಭೂತ ಸೌಲಭ್ಯಗಳಾಗಲಿ ಪೂರ್ಣ ಪ್ರಮಾಣದ ಶಿಕ್ಷಕರಾಗಲಿ ನೇಮಕವಾಗಿಲ್ಲ. ಪ್ರೌಢಶಾಲೆಗೆ ಕೇವಲ ಮೂರು ಜನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಹೀಗಾಗಿ ಟ್ಯಾಬ್‍ಗಳನ್ನು ವಿತರಿಸಿರುವುದಕ್ಕೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಆನ್‍ಲೈನ್ ತರಗತಿಗಳಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಿಲ್ಲ. ತಾಲೂಕಿನಲ್ಲೇ ಹಿಂದುಳಿದ ಗ್ರಾಮವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೂ ಪ್ರಭಾವ ಬೀರಿದ್ದು ಲಾಕ್‍ಡೌನ್ ವೇಳೆ ಕೆಲ ವಿದ್ಯಾರ್ಥಿಗಳು ಕೂಲಿ ಕೆಲಸಕ್ಕೆ ಸೇರಿದ್ದು, ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಉಚಿತವಾಗಿ ಟ್ಯಾಬ್‍ಗಳನ್ನ ವಿತರಿಸಿರುವುದು ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಟ್ಯಾಬ್ ದಾನಿಗಳಾದ ಹರೀಶ್ ಪತ್ತಾರ್, ವಿರೇಶ್ ಒಳಬಳ್ಳಾರಿ, ಮಂಜುನಾಥ್ ಪಾಟೀಲ್, ಶಾಲಾ ಮುಖ್ಯೋಪಾಧ್ಯಾಯ ರವಿ ಬಿ.ಆರ್. ನಟರಾಜ್ ಕುರಕಿ, ಅನುಸೂಯ ಹವಳೆ, ನಾಗಪ್ಪ, ಮಹಾಂತೇಶ್ ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಇತರರು ಭಾಗವಹಿದ್ದರು.