ಬೆಂಗಳೂರು: ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ವಿ.ಸೋಮಣ್ಣ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಪ್ರಮುಖ ಲೇಖಕ, ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು ಎಂದು ಸ್ಮರಿಸಿದ್ದಾರೆ.
Advertisement
Advertisement
ಡಾ.ಸಿದ್ದಲಿಂಗಯ್ಯ ಅವರು 1954 ರಲ್ಲಿ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ್ದರು. ಅವರ ಜಿಲ್ಲೆಯಿಂದಲೇ ನಾನು ರಾಜಕೀಯ ಪ್ರವೇಶ ಮಾಡಿದ್ದು ಎಂಬುದನ್ನು ವಿನಮ್ರತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಸಿದ್ದಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳು ಸಂದಿವೆ.
Advertisement
ಕವಿ ಡಾ.ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ 2006-08ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
Advertisement
‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಗೀತೆಯನ್ನು ಎರಡು ಚಲನಚಿತ್ರಗಳಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ‘ಗೆಳತಿ ಓ ಗೆಳತಿ’ ಬಂಡಾಯ ಕವಿಯ ಪ್ರೇಮ ಗೀತೆಗಳು. ಅವರೊಳಗಿದ್ದ ವ್ಯವಸ್ಥೆಯ ಬಗೆಗಿನ ಕಿಚ್ಚಿನ ಜೊತೆಯಲ್ಲೇ ಒಬ್ಬ ಅಪ್ಪಟ ಪ್ರೇಮಿಯು ಇದ್ದ ಎಂಬುದಕ್ಕೆ ಮೇಲಿನ ಗೀತೆಗಳು ಸದಾ ಹಸಿರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಅವರ ಸಾಹಿತ್ಯಾಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಸಹ ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕವಿ ಸಿದ್ದಲಿಂಗಯ್ಯನವರು ತಮ್ಮ `ಹೊಲೆಮಾದಿಗರ ಹಾಡು’ ಕವನ ಸಂಕಲನದ ಮೂಲಕ ದಮನಿತರ, ತುಳಿತಕ್ಕೆ ಒಳಗಾದವರ ನೋವು, ದುಃಖ, ದುಮ್ಮಾನಗಳನ್ನು ಸಮಾಜದ ಮುಂದೆ ಇರಿಸಿದ್ದರು. ತಮ್ಮ ಸಾಹಿತ್ಯದಲ್ಲಿ ಗಾಂಭೀರ್ಯತೆಯ ನಡುವೆಯೂ ಅಸಹಾಯಕರ ನೋವು, ಅವಮಾನಗಳನ್ನು ಮನನೀಯವಾಗಿ ಚಿತ್ರಿಸುತ್ತಿದ್ದರು. ನನ್ನೊಂದಿಗೆ ಆತ್ಮೀಯರಾಗಿದ್ದ ಕವಿ ಸಿದ್ದಲಿಂಗಯ್ಯನವರು ದೂರಾಗಿರುವುದು ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸದನದ ಭೂಷಣಪ್ರಾಯರಾಗಿ ವಿಷಯಗಳನ್ನು ಚರ್ಚಿಸುತ್ತಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಕವಿ ಸಿದ್ದಲಿಂಗಯ್ಯನವರು ಪಾತ್ರರಾಗಿದ್ದನ್ನೂ ಸಚಿವರು ಸ್ಮರಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಹಂಪಿ ಕನ್ನಡ ವಿವಿಯ ನಾಡೋಜ ಪುರಸ್ಕಾರ, ವಿ.ಸೋಮಣ್ಣ ಪ್ರತಿಷ್ಠಾನದ ಪ್ರಥಮ ಜೆ.ಹೆಚ್ ಪಟೇಲ್ ಪ್ರಶಸ್ತಿ, ಪ್ರತಿಷ್ಟಿತ ನೃಪತುಂಗ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಹಿರಿಯ ಕವಿಗಳ ಚೇತನಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕೋರಿದ್ದಾರೆ.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸಹ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ದಲಿತ ಚಳವಳಿಯ ಆದ್ವರ್ಯು ಹಾಗೂ ದಲಿತ ಸಾಹಿತ್ಯದ ಮೇರು ಆಗಿದ್ದ ಕವಿ ಸಿದ್ದಲಿಂಗಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕಾದ ಬಹುದೊಡ್ಡ ನಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು, ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಗುಣಗಾನ ಮಾಡಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು, ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು, ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.
ಎಚ್.ಕೆ.ಪಾಟೀಲ್ ಸಹ ಸಂತಾಪ ಸೂಚಿಸಿ, ಕನ್ನಡದ ಲೇಖಕ ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಡಾ.ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆ ಬಗ್ಗೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ ಮತ್ತು ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ನಮ್ಮೊಂದಿಗೆ ಕೆಲಸ ಮಾಡಿದ್ದರು. ತುಂಬಾ ಮೊನಚಾದ ಮಾತು ಹಾಗೂ ಅಷ್ಟೇ ಹಾಸ್ಯಪ್ರಜ್ಞೆ ಅವರಲ್ಲಿತ್ತು. ಸದನದಲ್ಲಿ ಅವರು ಮಾತನಾಡುತ್ತಿದ್ದಾಗ ಹೊಸ ವಿಚಾರಗಳು ಪ್ರಕಟವಾಗುತ್ತಿದ್ದವು ಎಂದಿದ್ದಾರೆ.
ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದವರಾದ ಇವರು, ನಮ್ಮ ಉತ್ತರ ಕರ್ನಾಟಕ ಭಾಷೆಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಕೆಲಸ ಮಾಡಿದ್ದರು. ಕನ್ನಡದ ಸಾಹಿತ್ಯ, ದಲಿತ-ಬಂಡಾಯ ಚಳುವಳಿಗೆ ಹೊಸ ದಿಕ್ಕನ್ನು ತಂದುಕೊಟ್ಟವರು. ಉತ್ತಮ ಭಾಷಣಕಾರರಾಗಿದ್ದ ಸಿದ್ದಲಿಂಗಯ್ಯನವರು, ಅಂಬೇಡ್ಕರ್, ಪೆರಿಯಾರ್ ಮತ್ತು ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಬೆಳೆದವರು.
ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು ಇವರ ದಾಖಲಾರ್ಹ ಕೃತಿಗಳು. ಕನ್ನಡ ಸಾಹಿತ್ಯಕ್ಕೊಂದು ಹೊಸ ತಿರುವನ್ನು ನೀಡಿದ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದ ಡಾ.ಸಿದ್ದಲಿಂಗಯ್ಯ ನಿಧನರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡದ ಉತ್ತಮ ಸಂಸದೀಯ ಪಟುವಾಗಿದ್ದ ಇವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ವೈರಸ್ ನಿಂದಾಗಿ ಹೋರಾಟದ ಸಾಹಿತಿಗಳನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ, ಇದೊಂದು ವಿಪರ್ಯಾಸ. ಇತ್ತಿಚೆಗೆ ನನ್ನ ಕೃತಿಗೆ ಮುನ್ನುಡಿ ಬರೆಯಲು ಕೋರಿದ್ದಾಗ ಪ್ರೀತಿಯಿಂದ ಒಪ್ಪಿ ಬರೆದು ಕೊಡುವುದಾಗಿ ಹೇಳಿದ್ದರು. ಒಬ್ಬ ಸ್ನೇಹಜೀವಿ, ಬುದ್ಧಿಜೀವಿ ಹಾಗೂ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಆಗಲಿದ ಸಿದ್ದಲಿಂಗಯ್ಯನವರ ಆತ್ಮಕ್ಕೆ ಶಾಂತಿಯನ್ನು ಹಾಗೂ ಕುಟುಂಬ ವರ್ಗಕ್ಕೆ, ಬಂಧುವರ್ಗಕ್ಕೆ, ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.