ಬೆಂಗಳೂರು: ಯುವಕನೋರ್ವ ಸಾವಿನಲ್ಲೂ ಎಂಟು ಜನರಿಗೆ ಬಾಳಿಗೆ ಬೆಳಕಾಗಿ ಇಹಲೋಕ ತ್ಯಜಿಸಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ತಾನಿನ್ನು ಬದುಕುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಅಂಗಾಂಗಗಳನ್ನ ದಾನ ಮೂಡುವ ಮೂಲಕ ಎಂಟು ಜನರ ಬಾಳಿಗೆ ದೀಪಾವಳಿಯ ಬೆಳಕು ನೀಡಿದ್ದಾರೆ.
26 ವರ್ಷದ ಶಿವರಾಜು ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ. ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಮದ ನಿವಾಸಿಯಾಗಿದ್ದ ಶಿವರಾಜು ಅಪಘಾತದಲ್ಲಿ ಗಾಯಗೊಂಡಿದ್ದರು. ಅಪಘಾತದ ಶಿವರಾಜು ತಲೆಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು.
ಗಾಯಾಳು ಶಿವರಾಜು ಅವರನ್ನ ಕೋಡಿಗೆಹಳ್ಳಿಯ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನ ಚಿಕಿತ್ಸೆಗೆ ಶಿವರಾಜು ಸ್ಪಂದನೆ ನೀಡಿರಲಿಲ್ಲ. ಶಿವರಾಜು ಬದುಕೋದು ಅಸಾಧ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು.
ಶಿವರಾಜು ತಂದೆ ಮುನಿರಾಜು ಮತ್ತು ತಾಯಿ ಮುನಿಲಕ್ಷ್ಮಿ ಅವರ ಅನುಮತಿ ಮೇರೆಗೆ ವೈದ್ಯರು ಅಂಗಾಂಗಳನ್ನು ಪಡೆದುಕೊಂಡಿದ್ದಾರೆ. ಶಿವರಾಜು ಅವರ ಅಂಗಾಂಗದಿಂದ ಎಂಟು ಜನರಿಗೆ ಸಹಾಯವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.