– 2 ಲಕ್ಷ ರೂ.ಸಾಲ ತೀರಿಸಲು ಆಗದ್ದಕ್ಕೆ ಕೃತ್ಯ
ಲಕ್ನೋ: ಸಾಲ ಮರುಪಾವತಿಸಲು ಸಾಧ್ಯವಾಗದ್ದಕ್ಕೆ ಹೆತ್ತ ತಂದೆಯೇ ತನ್ನ ಮಗಳನ್ನು ಮಾರಾಟ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮೀರತ್‍ನ ಪರ್ತಾಪುರದಲ್ಲಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಾಲ ಮರು ಪಾವತಿಸಲು ಸಾಧ್ಯವಾಗದ್ದಕ್ಕೆ ತಂದೆಯೇ 2 ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ಮಗಳು ಆರೋಪಿಸಿದ್ದಾಳೆ. ಅಲ್ಲದೆ ತನ್ನ ತಾಯಿ ಸಹಾಯದಿಂದ ಸಂತ್ರಸ್ತೆ ಅಪರಾಧ ವಿಭಾಗದ ಎಸ್‍ಪಿಯವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾಳೆ.
ಮಗಳಿಗೆ ಕಿರುಕುಳ ನೀಡುವುದನ್ನು ವಿರೋಧಿಸಿದ್ದಕ್ಕೆ ಕಬ್ಬಿಣದ ರಾಡ್‍ನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಯ ಪತ್ನಿ ತಿಳಿಸಿದ್ದಾರೆ. ಆರೋಪಿಯ ಕುಟುಂಬಸ್ಥರು ಗಾಜಿಯಾಬಾದ್‍ನವರಾಗಿದ್ದು, ಪರ್ತಾಪುರದ ಶತಾಬ್ದಿನಗರದಲ್ಲಿ ವಾಸವಿದ್ದಾರೆ. ಆರೋಪಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಲವು ಅಪರಾಧ ಪ್ರಕರಣಗಳಲ್ಲಿ ತೊಡಗಿರುವ ಆರೋಪಿ ಈ ಹಿಂದೆ ತಿಹಾರ್ ಹಾಗೂ ದಾಸ್ನಾ ಜೈಲು ವಾಸ ಅನುಭವಿಸಿದ್ದಾನೆ.
ಬರಾತ್ ಜಿಲ್ಲೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರಿಂದ ಆರೋಪಿ 2 ಲಕ್ಷ ರೂ. ಸಾಲ ಪಡೆದಿದ್ದ. ಈ ಸಾಲವನ್ನು ತೀರಿಸಲು ಸಾಧ್ಯವಾಗದ್ದಕ್ಕೆ ಮಗಳನ್ನು ಮಾರಿದ್ದಾನೆ ಎಂದು ಆರೋಪಿ ಪತ್ನಿ ತಿಳಿಸಿದ್ದಾರೆ.
ಸಾಲ ನೀಡಿದವರು ನನ್ನನ್ನು ಒಂದು ವರ್ಷದ ವರೆಗೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದು, ಬಳಿಕ ಲೈಂಗಿಕ ಕಿರುಕುಳ ನೀಡಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಕೆಲ ದಿನಗಳ ಹಿಂದೆ ಹುಡುಗಿ ಸಾಲ ನೀಡಿದವರ ಮನೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ತಾಯಿಯ ಸಹಾಯದಿಂದ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
ಪ್ರಕರಣದ ಕುರಿತು ತನಿಖೆ ನಡೆಸುವಂತೆ ಮೀರತ್ ಎಸ್‍ಪಿ ರಾಮರಾಜ್ ಅವರು ಸಿಒ ಬ್ರಹ್ಮಪುರಿ ಅವರಿಗೆ ಸೂಚಿಸಿದ್ದಾರೆ. ತಾಯಿ ಹಾಗೂ ಮಗಳು ಈಗಾಗಲೇ ದೂರು ನೀಡಿದ್ದಾರೆ. ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ರಾಮ್‍ರಾಜ್ ತಿಳಿಸಿದ್ದಾರೆ.