ಮಂಡ್ಯ: ಕಾರಿನ ಚಾಲಕನೊಬ್ಬ ತನಗೆ ಸಾಲ ಕೊಟ್ಟ ಮಹಿಳೆಯನ್ನೇ ಕೊಲೆ ಮಾಡಿದ್ದು, ಮೃತದೇಹವನ್ನು ಎರಡು ದಿನ ಕಾರಿನಲ್ಲಿ ಇಟ್ಟುಕೊಂಡು ಸುತ್ತಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.
ಚಿಕ್ಕಬಾಗಿಲು ಗ್ರಾಮದ ನಿವಾಸಿ ಜಯಮ್ಮ ಕೊಲೆಯಾದ ಮಹಿಳೆ. ಈಕೆ ಸಣ್ಣದಾಗಿ ಬಡ್ಡಿ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆದರೆ ಕಷ್ಟ ಎಂದು ಸಾಲ ಪಡೆದುಕೊಂಡಿದ್ದ ಅದೇ ಗ್ರಾಮದ ಸುರೇಶ್ ಎಂಬಾತ ಕೊಲೆ ಮಾಡಿದ್ದಾನೆ.
Advertisement
Advertisement
ಆರೋಪಿ ಸುರೇಶ್ ಬೆಂಗಳೂರಿನಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಲಾಕ್‍ಡೌನ್ ವೇಳೆ ಊರಿಗೆ ಮರಳಿ ಬಂದಿದ್ದ. ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಜಯಮ್ಮನ ಬಳಿ ಬಡ್ಡಿಗೆ ಸಾಲ ಪಡೆದಿದ್ದನು. ಬಳಿಕ ಅವರಿಬ್ಬರ ನಡುವೆ ಅನೇಕ ಬಾರಿ ಹಣದ ವ್ಯವಹಾರ ನಡೆದಿತ್ತು. ಆರೋಪಿ ಸುರೇಶ್ ಜಯಮ್ಮನ ಹಣ ಮತ್ತು ಒಡವೆ ಮೇಲೆ ಕಣ್ಣು ಹಾಕಿದ್ದನು.
Advertisement
Advertisement
ಸೆ.13ರಂದು ಜಯಮ್ಮನ ಕಿರಿಯ ಮಗನಿಗೆ ಮದುವೆ ಮಾಡಲು ಹೆಣ್ಣು ತೋರಿಸುತ್ತೇನೆಂದು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಎರಡು ದಿನ ಶವವನ್ನು ಕಾರಿನಲ್ಲೇ ಇಟ್ಟುಕೊಂಡು ಓಡಾಡಿದ್ದಾನೆ. ಬಳಿಕ ಮೈಸೂರಿನ ವರುಣ ಸಮೀಪ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾನೆ. ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ ಜಯ್ಯಮ್ಮನ ಕಿರಿಯ ಮಗ ಕುಮಾರ್ ಸೆ.18ರಂದು ಊರಿಗೆ ಬಂದಾಗ ತಾಯಿ ಊರಿನಲ್ಲಿ ಇಲ್ಲದಿರೋದು ತಿಳಿದಿದೆ. ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂದು ಸುಮ್ಮನಾಗಿದ್ದಾನೆ.
ಸೆ.19ರಂದು ಬೆಳಕವಾಡಿ ಪೊಲೀಸ್ ಠಾಣೆಯ ಪಿಎಸ್‍ಐ ಕರೆ ಮಾಡಿ ಕರೆಸಿಕೊಂಡು ಬಲವಂತವಾಗಿ ತಾಯಿ ನಾಪತ್ತೆಯಾಗಿದ್ದಾಳೆಂದು ದೂರು ಬರೆಸಿಕೊಂಡಿದ್ದರು ಎಂದು ಕುಮಾರ್ ಆರೋಪಿಸಿದ್ದಾನೆ. ಅಲ್ಲದೇ ಭಾನುವಾರ ಮತ್ತೆ ಕರೆ ಮಾಡಿ ಸುರೇಶ್ ನಿನ್ನ ತಾಯಿಯನ್ನು ಕೊಲೆಗೈದು ಠಾಣೆಗೆ ಬಂದು ಶರಣಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಸುರೇಶ್ ಸಹೋದರ ಮಳವಳ್ಳಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅದಕ್ಕಾಗಿ ಪೊಲೀಸರು ಆರೋಪಿಗೆ ಪ್ರಕರಣದಲ್ಲಿ ಸಹಾಯ ಮಾಡುತ್ತಿದ್ದಾರೆಂದು ಜಯಮ್ಮನ ಮಕ್ಕಳು ಆರೋಪಿಸಿದ್ದಾರೆ. ಈ ಕುರಿತು ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.