ಬೆಂಗಳೂರು: ಮಗನೊಬ್ಬ ತನ್ನ 55 ವರ್ಷದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಪಡಬಾರದ ಕಷ್ಟ ಅನುಭವಿಸಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹೌದು. 38 ವರ್ಷದ ಶಿವಾಜಿನಗರದ ನಿವಾಸಿಯ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ತನ್ನ ತಾಯಿಯನ್ನು ಖಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಗಾಗಿ ಸುಮಾರು 5 ಗಂಟೆಗಳ ಕಾಲ ಕಾದಿದ್ದಾರೆ. ಕೊನೆಗೆ ಒಬ್ಬ ಚಾಲಕನಿಗೆ 15 ಸಾವಿರ ಹಣ ನೀಡಿದ ಬಳಿಕ ಆತ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಒಪ್ಪಿಕೊಂಡಿದ್ದು, ಕರೆದೊಯ್ದಿದ್ದಾನೆ ಕೂಡ. ಆದರೆ ಕೊನೆಗೂ ತನ್ನ ತಾಯಿ ಬದುಕುಳಿಯಲಿಲ್ಲ ಎಂದು ವ್ಯಕ್ತಿ ಕಣ್ಣೀರು ಹಾಕಿದ್ದಾರೆ.
Advertisement
Advertisement
ಚೆನ್ನಾಗಿಯೇ ಇದ್ದ ನನ್ನ ತಾಯಿ ಜೂನ್ 9 ರಂದು ಹಠಾತ್ತಾಗಿ ಅನಾರೋಗ್ಯಕ್ಕೀಡಾದರು. ಕೂಡಲೇ ನಾನು 4 ಅಂಬುಲೆನ್ಸ್ ಗಳಿಗೆ ಕರೆ ಮಾಡಿದೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಕೊನೆಗೆ ನನ್ನ ಕಾರಿನಲ್ಲೇ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದೆ. ಸುಮಾರು 4 ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾರೂ ನನ್ನ ತಾಯಿಯನ್ನು ದಾಖಲು ಮಾಡಿಕೊಂಡಿಲ್ಲ. ಕೊನೆಗೆ 5ನೇ ಆಸ್ಪತ್ರೆ ಬೆಳ್ಳಂದೂರಿನಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದಾಖಲು ಮಾಡಿದೆ ಎಂದು ಮಗ ಬೇಸರ ವ್ಯಕ್ತಪಡಿಸಿದರು.
Advertisement
ಜುಲೈ 10 ರಂದು ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇತ್ತ ತಾಯಿಯ ಆರೋಗ್ಯ ಕೂದ ಹದೆಗೆಡುತ್ತಿರುವುದನ್ನು ಗಮನಿಸಿದ ಮಗ ರಮೇಶ್, ಮರುದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ತಾಯಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧರಿಸುತ್ತಾರೆ.
Advertisement
ಹೀಗಾಗಿ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಸಾಲು ಸಾಲಾಗಿ ನಿಂತಿದ್ದ ಅಂಬುಲೆನ್ಸ್ ಗಳಲ್ಲಿ ಒಂದನ್ನು ತನ್ನ ತಾಯಿಯನ್ನು ಕರೆದೊಯ್ಯಲು ಕೊಡಿ ಎಂದು ಕೇಳಿದೆ. ಆಗ ಅವರು ಸಾಧ್ಯವಿಲ್ಲ ಎಂದು ಹೇಳಿದರು. ಇದರಿಂದ ಏನೂ ಮಾಡಲು ತೋಚದೆ ಒಂದು ಬಾರಿ ದಿಗ್ಭ್ರಾಂತನಾದೆ. ಅಲ್ಲದೆ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ಪರಪರಿಯಾಗಿ ಬೇಡಿಕೊಂಡೆ. ಆದರೆ ಅವರು ನನ್ನ ಬೇಡಿಕೆಯನ್ನು ನಿರಾಕರಿಸಿದರು. ಅಲ್ಲದೆ ಅದು ತುರ್ತು ಪರಿಸ್ಥಿತಿಗೆ ಮಾತ್ರ ಬಳಕೆ ಮಾಡಲು ಇರುವುದು ಎಂದು ಅಮಾನವೀಯವಾಗಿ ವರ್ತಿಸಿದರು. ಹಾಗಾದ್ರೆ ನನ್ನ ತಾಯಿಯದ್ದು ಎಮರ್ಜೆನ್ಸಿ ಕೇಸ್ ಅಲ್ವಾ..? ಇದನ್ನು ಯಾರು ನಿರ್ಧಾರ ಮಾಡ್ತಾರೆ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಕೊನೆಗೆ ಒಬ್ಬ ಅಂಬುಲೆನ್ಸ್ ಚಾಲಕ ನನ್ನ ತಾಯಿಯನ್ನು ಕರೆದೊಯ್ಯಲು ಒಪ್ಪಿಕೊಂಡ. ಆದರೆ ಆತ 15 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟನು. ಆದರೂ ನನ್ನ ತಾಯಿಯನ್ನು ಉಳಿಸಿಕೊಳ್ಳಲೆಂದು ಆತನಿಗೆ 15 ಸಾವಿರವನ್ನೂ ನೀಡಿದೆ. ಹಾಗೆಯೇ ತಾಯಿಯನ್ನು ಸಂಜೆ 4 ಗಂಟೆ ಸುಮಾರಿಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ದುಃಖದ ವಿಚಾರವೆಂದರೆ ನನ್ನ ತಾಯಿಯನ್ನು ದಾಖಲಿಸಿ 90 ನಿಮಿಷದ ಬಳಿಕ ಆಕೆ ತನ್ನ ಕೊನೆಯುಸಿರೆಳೆದರು ಎಂದು ಹೇಳುತ್ತಾ ರಮೇಶ್ ಬಿಕ್ಕಿ ಬಿಕ್ಕಿ ಅತ್ತರು.
ಆಸ್ಪತ್ರೆಗಳು ಮೊದಲು ಸರಿಯಾದ ಚಿಕಿತ್ಸೆ ನಿಡಲಿ, ಆ ಬಳಿಕ ಹಣ ಪಡೆದುಕೊಳ್ಳಲಿ ಎಂದು ರಮೇಶ್ ಆಸ್ಪತ್ರೆ ವಿರುದ್ದ ಕಿಡಿಕಾರಿದ್ದಾರೆ.