ಮೈಸೂರು: ಆಷಾಢ ಮಾಸದ ಕೊನೆ ಶುಕ್ರವಾರ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಬರಿಗಾಲಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಪ್ರತಿ ಆಷಾಢ ಮಾಸದಲ್ಲೂ ಮೈಸೂರಿಗೆ ಬಂದು ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತುತ್ತಾರೆ. ಬಳಿಕ ತಾಯಿ ಚಾಮುಂಡಿಯ ದರ್ಶನ ಪಡೆದುಕೊಳ್ಳುತ್ತಾರೆ. ಅದರಂತೆಯೇ ಇಂದು ನಾಲ್ಕನೇ ಆಷಾಢ ಶುಕ್ರವಾರವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಶೋಭಾ ಕರಂದ್ಲಾಜೆ ಮುಂಜಾನೆಯೇ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿ, ತಾಯಿಯ ದರ್ಶನ ಪಡೆದುಕೊಂಡಿದ್ದಾರೆ.
ಆಷಾಢ ಮಾಸವಾಗಿರುವುದರಿಂದ ಸಾವಿರಾರು ಜನರು ತಾಯಿಯ ದರ್ಶನ ಪಡೆಯಲು ಬೆಟ್ಟಕ್ಕೆ ಆಗಮಿಸುತ್ತಾರೆ. ಇದರಿಂದ ಕೊರೊನಾ ಸೋಂಕು ಹರಡುತ್ತೆ ಎಂದು ಜಿಲ್ಲಾಡಳಿತ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೆಟ್ಟಕ್ಕೆ ಹೋಗಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಗ್ರಾಮಸ್ಥರು ಪೊಲೀಸರಿಗೆ ಪ್ರಶ್ನೆ ಕೇಳಿದ್ದಾರೆ.
ಬೆಟ್ಟಕ್ಕೆ ತೆರಳುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಮಹಾನಗರ ಪಾಲಿಕೆ ಸದಸ್ಯರು, ಮಾಜಿ ಶಾಸಕರಿಗೂ ಬೆಟ್ಟಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ. ಆದರೆ ಸಂಸದೆ ಆದ ಕಾರಣ ಶೋಭಾ ಕರಂದ್ಲಾಜೆಗೆ ಹೋಗಲು ಅವಕಾಶ ನೀಡಿದ್ದೀರಾ? ಎಂದು ಪೊಲೀಸರ ಜೊತೆ ಜನಪ್ರತಿನಿಧಿಗಳು ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಅಲ್ಲದೇ ಜನಪ್ರತಿನಿಧಿಗಳು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರತಿ ವರ್ಷ ಬೆಳಗ್ಗೆ 5.30ರಿಂದ ರಾತ್ರಿ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಆದರೆ ಕೊರೊನಾ ಕಾರಣಕ್ಕಾಗಿ ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿದೆ. ಆಷಾಢ ಮಾಸದ ಕೊನೆಯ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಪೂಜಾ ಕೈಂಕರ್ಯಗಳು ಮುಕ್ತಾಯವಾಗಿವೆ. ಈಗಾಗಲೇ ಪೂಜೆ ಮುಗಿಸಿ ದೇವಾಲಯಕ್ಕೆ ಬೀಗ ಹಾಕಲಾಗಿದೆ.