ಬೆಂಗಳೂರು: ರಾಜ್ಯದ ಸಾರಿಗೆ ನೌಕರರಿಗೆ ಕೋವಿಡ್ ಸೋಂಕು ತಗುಲಿರುವುದು ಹಾಗೂ ಅವರು ಮೃತಪಟ್ಟಿರುವುದರ ಬಗ್ಗೆ ಸಾರಿಗೆ ಇಲಾಖೆಯ ಬಳಿ ಮಾಹಿತಿಯೇ ಇಲ್ಲದಿರುವುದು ಸರ್ಕಾರದ ಬೇಜಾವಾಬ್ದಾರಿತನವನ್ನು ತೋರಿಸುತ್ತದೆ ಎಂದು ಎಎಪಿಯ ರಾಜ್ಯ ಯುವಘಟಕದ ಅಧ್ಯಕ್ಷರಾದ ಮುಕುಂದ್ ಗೌಡರವರು ಕಿಡಿಕಾರಿದ್ದಾರೆ.
Advertisement
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಕುಂದ್ ಗೌಡರವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸರ್ಕಾರವು ಪ್ರಮುಖ ಬೇಡಿಕೆಯನ್ನೇ ಈಡೇರಿಸದಿದ್ದರೂ, ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಮರಳಿದ್ದರು. ಮೊದಲಿನಿಂದಲೂ ನೌಕರರನ್ನು ತಾತ್ಸಾರದಿಂದ ನೋಡುತ್ತಿದ ಸಾರಿಗೆ ಇಲಾಖೆಯು ಮುಷ್ಕರದ ನಂತರ ಅವರನ್ನು ಶತ್ರುಗಳಂತೆ ಕಾಣುತ್ತಿದೆ. ಕೋವಿಡ್‍ಗೆ ಬಲಿಯಾದ ನೌಕರರಿಗೆ ಪರಿಹಾರ ನೀಡುವುದು ಹಾಗಿರಲಿ, ಎಷ್ಟು ನೌಕರರಿಗೆ ಸೋಂಕು ತಗುಲಿದೆ ಎಂಬ ಅಂಕಿಅಂಶ ಕೂಡ ಸರ್ಕಾರದ ಬಳಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ
Advertisement
Advertisement
ಸಾರಿಕೆ ನೌಕರರು ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವುದು, ಮೃತಪಟ್ಟಿರುವುದು ಹಾಗೂ ಪರಿಹಾರ ವಿತರಣೆ ಮಾಹಿತಿ ತಿಳಿಯಲು ನಾವು ಆರ್‍ಟಿಐ ಅರ್ಜಿ ಸಲ್ಲಿಸಿದ್ದೆವು. ನಾವು ಕೇಳಿದ ಮೂರು ಪ್ರಶ್ನೆಗಳಿಗೂ ಇಲಾಖೆಯು ತಮ್ಮ ಬಳಿ ಮಾಹಿತಿ ಇಲ್ಲವೆಂದು ಉತ್ತರ ನೀಡಿದೆ. ಅಧಿಕಾರಿಗಳ ಮಾಹಿತಿ ಹೊಂದಿರುವ ಸರ್ಕಾರವು ನೌಕರರನ್ನು ಮಾತ್ರ ಇಷ್ಟು ಕೇವಲವಾಗಿ ನೋಡುತ್ತಿರುವುದು ದುರಂತ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಇದು ಎತ್ತಿ ತೋರಿಸುತ್ತದೆ. ಕಷ್ಟಪಟ್ಟು ದುಡಿಯುವ ಕಾರ್ಮಿಕರನ್ನು ಹೀನಾಯವಾಗಿ ಕಾಣುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕಾರ್ಮಿಕರು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ ಎಂಬುದನ್ನು ಸಾರಿಗೆ ಸಚಿವರಾದ ಲಕ್ಷಣ್ ಸವದಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
Advertisement
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ಸಿಬ್ಬಂದಿ ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದು ಭಾಷಣ ಬಿಗಿಯುವ ಸಾರಿಗೆ ಸಚಿವರು ನೌಕರರ ಹಿತಕಾಪಾಡಲು ಏನು ಮಾಡಿದ್ದಾರೆ? ನೌಕರರಿಗೆ ಉಚಿತ ಸ್ಯಾನಿಟೈಸರ್ ನೀಡಲೂ ಅವರಿಗೆ ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್‍ನಿಂದ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಲು ಯಾವ ಕ್ರಮವನ್ನೂ ಅವರು ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮೃತಪಟ್ಟ ಪ್ರತಿಯೊಬ್ಬ ನೌಕರರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ಎಷ್ಟು ಸಿಬ್ಬಂದಿಗೆ ಸೋಂಕು ತಗುಲಿತ್ತು, ಎಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ, ಎಷ್ಟು ಮಂದಿಗೆ ಪರಿಹಾರ ದೊರೆತಿದೆ ಎಂಬ ಅಂಶವನ್ನು ಶೀಘ್ರವೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.