ಸಾರಿಗೆ ಮುಷ್ಕರ – ಗೈರು ಹಾಜರಾದ ಸಿಬ್ಬಂದಿ ಕೆಲಸದಿಂದಲೇ ವಜಾ

Public TV
3 Min Read
bus 1

ಬೆಂಗಳೂರು/ಹುಬ್ಬಳ್ಳಿ: ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರ 3ನೇ ದಿನವು ಮುಂದುವರಿದಿದೆ. ಇದರಿಂದ ಸಾರ್ವಜನಿಕರು ಸಂಚರಿಸಲು ಬಸ್ ಇಲ್ಲದೆ ಪರದಾಡುವಂತಾಗಿದೆ. ಹಾಗಾಗಿ ಸಾರಿಗೆ ಅಧಿಕಾರಿಗಳು ಚಾಲಕ ಹಾಗೂ ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೂ ಕೆಲಸಕ್ಕೆ ಹಾಜರಾಗದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರನ್ನು ಸಾರಿಗೆ ಇಲಾಖೆ ಸೇವೆಯಿಂದ ವಜಾಗೊಳಿಸಿದೆ.

CKM Bus stand 2

ಇಂದು 60 ಜನ ಪ್ರೋಬೆಷನರಿ ನೌಕರರು ಮತ್ತು 60 ಜನ ಟ್ರೈನಿ ಸೇರಿ ಒಟ್ಟು 120 ಬಿಎಂಟಿಸಿ ಸಿಬ್ಬಂದಿಯನ್ನು ಸಾರಿಗೆ ಅಧಿಕಾರಿಗಳು ಕೆಲಸದಿಂದ ವಜಾಗೊಳಿಸಿದ್ದಾರೆ. ನಿನ್ನೆಯೂ 96 ಟ್ರೈನಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಕೆಲಸಕ್ಕೆ ಗೈರಾದ ಹಿನ್ನಲೆ ಬಿಎಂಟಿಸಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬಿಎಂಟಿಸಿ ಯಂತೆ ಕೆಎಸ್‌ಆರ್‌ಟಿಸಿಯಲ್ಲೂ ಕೂಡ ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಬಸ್ ಮುಷ್ಕರಕ್ಕೆ ಪ್ರಚೋದನೆಗೊಳಿಸಿದ ಸಾರಿಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದೆ. ಸಾರ್ವಜನಿಕರಿಗೆ ತೊಂದರೆ ಹಾಗೂ ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 244 ಡ್ರೈವರ್ ಹಾಗೂ ಕಂಡಕ್ಟರ್, 5 ಜನ ಸಂಚಾರ ಮೇಲ್ವಿಚಾರಕರು, 34 ತಾಂತ್ರಿಕ ಸಿಬ್ಬಂದಿ ಹಾಗೂ 9 ಜನ ಇತರೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

shanthi nagar bus station bmtc 1

ಹುಬ್ಬಳ್ಳಿಯಲ್ಲೂ ಕೆಲಸಕ್ಕೆ ಗೈರು ಹಾಜರಾಗಿ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಡಚಣೆ ಉಂಟಾಗಲು ಕಾರಣರಾದ ಸಾರಿಗೆ ಸಿಬ್ಬಂದಿಯನ್ನು ಸಂಸ್ಥೆಯ ಸೇವೆಯಿಂದ ವಜಾಗೊಳಿಸಿದೆ. ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುವ ತರಬೇತಿ ಚಾಲಕರುಗಳಾದ ಹುಬ್ಬಳ್ಳಿ ಗ್ರಾಮಾಂತರ 2ನೇ ಡಿಪೋದ ಎಂ.ಬಿ.ಬಿ ಸಲದಿನ್ನಿ ಮತ್ತು ನವಲಗುಂದ ಡಿಪೋದ ಎಸ್.ಎಫ್. ಆದಮ್ಮ ಎಂಬುವವರನ್ನು ವಜಾಗೊಳಿಸಿ ನೇಮಕಾತಿ ಪ್ರಾಧಿಕಾರಸ್ಥರಾದ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ತರಬೇತಿ ಚಾಲಕ ಕಲಘಟಗಿ ಡಿಪೋದ ಜಗಜೀವರಾಮ ತಂದೆ ಜಟ್ಟೆಪ್ಪ ಎಂಬುವವರನ್ನು ಈಗಾಗಲೇ ವಜಾಗೊಳಿಸಲಾಗಿದೆ. ಇದರೊಂದಿಗೆ ವಿಭಾದಲ್ಲಿ ಗೈರು ಹಾಜರಿ ಕಾರಣಕ್ಕಾಗಿಯೇ ಮೂವರು ಸಿಬ್ಬಂದಿಗಳನ್ನು ವಜಾಗೊಳಿಸಿದಂತಾಗಿದೆ. ಸಾರಿಗೆ ಬಸ್‍ಗಳ ಕಾರ್ಯಚರಣೆಯಲ್ಲಿ ಚಾಲಕರ ಪಾತ್ರ ಮಹತ್ವದ್ದಾಗಿರುತ್ತದೆ. ವಜಾಗೊಂಡಿರುವ ತರಬೇತಿ ಚಾಲಕರು ಅನಧಿಕೃತವಾಗಿ ದೀರ್ಘಾವಧಿಗೆ ಗೈರುಹಾಜರು ಉಳಿಯುವ ದುರ್ನಡತೆ ಸಂಸ್ಥೆಯ ಹಿತಾಸಕ್ತಿಗೆ ಮಾರಕವಾಗಿರುತ್ತದೆ. ಸದರಿಯವರು ಅನಧಿಕೃತವಾಗಿ ಗೈರು ಹಾಜರಾಗಿ ಘಟಕದ ಬಸ್‍ಗಳ ಕಾರ್ಯಾಚರಣೆಗೆ ತೊಂದರೆ ಉಂಟಾಗಲು, ಸಾರ್ವಜನಿಕ ಪ್ರಯಾಣಿಕರಿಗೆ ಅತೀವ ಅನಾನುಕೂಲತೆ ಉಂಟಾಗಲು ಹಾಗೂ ಸಾರ್ವಜನಿಕರಿಗೆ ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದುವಂತಾಗಲು ಕಾರಣರಾಗಿರುತ್ತಾರೆ. ಆದ್ದರಿಂದ ಸದರಿಯವರು ಸಂಸ್ಥೆಯ ತರಬೇತಿ ಚಾಲಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅಸಮರ್ಥ ಹಾಗೂ ಅನರ್ಹ ಅಭ್ಯರ್ಥಿ ಎಂದು ಪರಿಗಣಿಸಿದ್ದು ಅವರು ನೇಮಕಾತಿ ಪೂರ್ವದ ತರಬೇತಿಯಲ್ಲಿರುವುದರಿಂದ ತರಬೇತಿಯಲ್ಲೂ ಸಹ ಮುಂದುವರಿಯಲು ಅನರ್ಹ ಎಂದು ತೀರ್ಮಾನಿಸಿ ಸದರಿಯವರ ಹೆಸರನ್ನು ನೇರ ನೇಮಕಾತಿ ಮೇಲೆ ಆಯ್ಕೆಗೊಂಡ ಚಾಲಕ ಹುದ್ದೆಯ ಆಯ್ಕೆ ಪಟ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

dwd bus stand 2

ವಜಾಗೊಂಡಿರುವ ಸಿಬ್ಬಂದಿ ಸಂಸ್ಥೆಯಲ್ಲಿ ಖಾಯಂ ನೇಮಕಾತಿ ಹಕ್ಕನ್ನೂ ಸಹ ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. ಸದರಿಯವರ ಗೈರು ಹಾಜರಾತಿ ಅವಧಿಯನ್ನು ಕರ್ತವ್ಯದ ಮೇಲಿಲ್ಲದ ಅವಧಿ ಎಂದೇ ಪರಿಗಣಿಸಲಾಗಿದೆ ಮತ್ತು ಸದರಿ ಅವಧಿಗೆ ಯಾವುದೇ ಆರ್ಥಿಕ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ksrtc red bus

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಇಂದು 12 ಬಸ್‍ಗಳ ಸಂಚಾರ

ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ಇಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಸಂಜೆಯವರೆಗೆ 12 ಬಸ್‍ಗಳು 17 ಸರತಿಗಳಲ್ಲಿ ಕಾರ್ಯಾಚರಣೆ ಮಾಡಿದೆ. ಹುಬ್ಬಳ್ಳಿ ಗ್ರಾಮಾಂತರ 1ನೇ ಡಿಪೋದಿಂದ 4 ಬಸ್, ಗ್ರಾಮಾಂತರ 2 ನೇ ಘಟಕದಿಂದ 6, ಕಲಘಟಗಿ ಘಟಕದಿಂದ ಮತ್ತು ನವಲಗುಂದ ಡಿಪೋದಿಂದ ತಲಾ 1 ಬಸ್ ಸಂಚರಿಸಿದೆ. ಈ ಬಸ್‍ಗಳನ್ನು ಬಳಸಿಕೊಂಡು ಹುಬ್ಬಳ್ಳಿಯಿಂದ ಗದಗಕ್ಕೆ 14, ಹಾವೇರಿಗೆ ಮತ್ತು ಕಲಘಟಗಿ ತಲಾ ಒಂದೊಂದು ಸರತಿ ಕಾರ್ಯಾಚರಣೆ ಮಾಡಲಾಗಿದೆ. ನಲಗುಂದದಿಂದ ಅಣ್ಣಿಗೇರಿಗೆ ಒಂದು ಹಾಗೂ ಕಲಘಟಗಿಯಿಂದ ಹುಬ್ಬಳ್ಳಿಗೆ ಎರಡು ಸರತಿ ಗಳಲ್ಲಿ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *