– ಸಾರಿಗೆ, ಸರ್ಕಾರ ಸಂಘರ್ಷಕ್ಕೆ ತೆರೆ
– ಮೂರು ದಿನಗಳ ಬಳಿಕ ಬಸ್‍ಗಳ ಸದ್ದು
ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ ಸಂಧಾನ ಯಶಸ್ವಿಯಾಗಿದ್ದು, ಬಸ್‍ಗಳು ರಸ್ತೆಗೆ ಇಳಿಯಲಿವೆ. ಕಳೆದ ಮೂರು ದಿನಗಳಿಂದ ಸ್ಥಗಿತವಾಗಿದ್ದ ಸಂಚಾರ ವ್ಯವಸ್ಥೆ ಪುನಃ ಆರಂಭವಾಗಲಿದೆ. ಇಂದು ರಾತ್ರಿಯಿಂದಲೇ ಬಸ್ ಸಂಚಾರ ಆರಂಭವಾಗಲಿವೆ.
ಸಭೆ ಬಳಿಕ ಮಾತನಾಡಿದ ಪ್ರತಿಭಟನೆಯ ನೇತೃತ್ವ ತೆಗೆದುಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ನಾವು ಕಳುಹಿಸಿದ ತಂಡ ವೇದಿಕೆಯನ್ನ ತಲುಪಿಲ್ಲ. ನಾಳೆಯಿಂದ ಬಸ್ ಸಂಚಾರ ಎಂದಿನಂತೆ ಆರಂಭವಾಗಲಿದೆ. ಮಾಧ್ಯಮಗಳಲ್ಲಿ ಸಂಧಾನ ಯಶಸ್ವಿ ಎಂಬ ವರದಿ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ನೌಕರರ ಬಾಳಲ್ಲಿ ಬೆಳಕು ಬರಲಿದೆ ಎಂದು ಹೇಳಿದರು.
ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಉಳಿದಂತೆ 8 ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆಯನ್ನು ನೀಡಿದೆ.
ಸರ್ಕಾರದ ಘೋಷಣೆಗಳು ಏನು?
1. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಸಲು ತೀರ್ಮಾನ.
2. ಕೋವಿಡ್-19 ಸೋಂಕಿನಿಂದ ಮೃತ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ.
3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.
4. ನೌಕರರ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ.
5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್. (ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿ.
6. ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ನಿರ್ಧಾರ.
7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.
8. ವೇತನ ಪರಿಷ್ಕರಣೆ, ಆರನೇ ವೇತನ ಆಯೋಗದ ಜಾರಿ ನಡೆಸುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ತೀರ್ಮಾನ
https://twitter.com/publictvnews/status/1338103261002231809