ಕೋಲಾರ: ಪ್ರತಿಭಟನಾ ನಿರತ ಸಾರಿಗೆ ನೌಕರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಪ್ರತಿಭಟನಾ ನಿರತ ಸಾರಿಗೆ ನೌಕರರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಅಲ್ಲದೆ ಲಾಠಿ ಚಾರ್ಜ್ ಖಂಡಿಸಿ ನೌಕರರು ಠಾಣೆಗೆ ಮುತ್ತಿಗೆ ಹಾಕಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು, ಕೋಲಾರ ಹೊರವಲಯದ ಸಂಗೊಂಡಹಳ್ಳಿ ಬಳಿ ಜೈಲ್ ಬರೋ ಚಳುವಳಿ ನಡೆಸಿದರು. ಈ ವೇಳೆ ಗ್ರಾಮಾಂತರ ಠಾಣೆ ಪೊಲೀಸರು ಸಾರಿಗೆ ನೌಕರರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಹೀಗಾಗಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೈಲ್ ಬರೋ ಚಳಿವಳಿ ನಡೆಸುತ್ತಿದ್ದ ಸಾರಿಗೆ ನೌಕರರನ್ನು ಪೊಲೀಸರು ವಿನಾಕಾರಣ ಬಂಧಿಸಿದ್ದಾರೆಂದು ಆರೋಪಿಸಿ, ನೌಕರರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.
ಪೊಲೀಸರ ಕ್ರಮ ಖಂಡಿಸಿ ಧಿಕ್ಕಾರ ಕೂಗಿ ಮುತ್ತಿಗೆ ಹಾಕಿದ್ದ ಹಿನ್ನಲೆ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸಾರಿಗೆ ನೌಕರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಹೀಗಾಗಿ ಪೊಲೀಸರ ಕ್ರಮಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು.