ಚಿಕ್ಕಮಗಳೂರು: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೀತಿಯಲ್ಲಿ ವಿವಾಹಿತೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋದು ಪೊಲೀಸರಿಗೆ ತಲೆನೋವಾಗಿದೆ.
ಈ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ನಡೆದಿದೆ. ಮೃತಳನ್ನ ಸವಿತ(40) ಎಂದು ಗುರುತಿಸಲಾಗಿದೆ. ಮೂಲತಃ ಮೂಡಿಗೆರೆ ತಾಲೂಕಿನ ಬಿಳಗುಳ ನಿವಾಸಿ ಸವಿತಾಳನ್ನ ಜಿಲ್ಲೆಯ ಕೊಪ್ಪ ತಾಲೂಕಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ಸವಿತಾ ತನ್ನ ತವರು ಸೇರಿದ್ದಳು.
Advertisement
Advertisement
ಗಂಡನ ಮನೆಯಿಂದ ಬಂದ ಸವಿತಾ ಬಿಳುಗುಳ ಸಮೀಪದ ಹೋಂಸ್ಟೇವೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಈ ಮಧ್ಯೆ ಬಿಳುಗುಳ ಪಕ್ಕದ ಗ್ರಾಮ ಕೊಲ್ಲಿಬೈಲ್ ಗ್ರಾಮದ ನಂದೀಶ್ ಗೌಡ ಎಂಬವನ ಜೊತೆ ಸವಿತಾಳಿಗೆ ಸ್ನೇಹ ಆರಂಭವಾಯಿತು. ಇಬ್ಬರ ಮಧ್ಯೆ ಇದ್ದದ್ದು ಯಾವ ರೀತಿಯ ಸ್ನೇಹ ಎಂದು ಯಾರಿಗೂ ಗೊತ್ತಿಲ್ಲ. ಕೆಲಸಕ್ಕೆ ಹೋಗಿ ಬರುವಾಗ ಈತನೇ ಡ್ರಾಪ್-ಪಿಕಪ್ ಮಾಡುತ್ತಿದ್ದ. ಈತ ಕೂಡ ಅಲ್ಲೇ ಸಮೀಪದ ಎಸ್ಟೇಟ್ ವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ.
Advertisement
Advertisement
ಅನ್ಯೋನ್ಯವಾಗಿದ್ದ ಇವರ ಸಂಬಂಧ ಇತ್ತೀಚೆಗೆ ಮುರಿದು ಬಿದ್ದಿತ್ತು. ಎಲ್ಲಿವರೆಗೆ ಅಂದರೆ ಆಕೆ ನಾನು ಪೆಟ್ರೋಲ್ ಸುರಿದುಕೊಂಡು ಸಾಯ್ತಿನಿ ಎನ್ನುವಷ್ಟು. ಆಗ ನಂದೀಶ್ ನಿಂದು ಬರೀ ಇದೇ ಆಯ್ತು. ಸಾಯಿ ನೋಡೋಣ ನಾನೇ ಬೆಂಕಿ ಪಟ್ಟಣ ತರ್ತೀನಿ ಅಂತ ಎಂದಿದ್ದನಂತೆ. ಮೂರು ದಿನಗಳ ಹಿಂದೆ ಕೆಲಸಕ್ಕೆ ಹೋಗಿ ಬರುವ ಮಾರ್ಗದ ಮಧ್ಯೆ ಸವಿತಾಳ ದೇಹ ಹೊತ್ತಿ ಉರಿದು ಭಾಗಶಃ ಸುಟ್ಟಿತ್ತು. ಆಗ ಇದೇ ನಂದೀಶ್ ಆಕೆಯನ್ನ ಜೀಪ್ ತಂದು ಆಸ್ಪತ್ರೆಗೆ ಸೇರಿಸಿದ್ದ. ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಸವಿತಾಳನ್ನ ಮಂಗಳೂರಿಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು.
ಸವಿತಾಳ ದೇಹ ಹೊತ್ತಿ ಉರಿಯುವಾಗ ಆಕೆಯನ್ನ ರಕ್ಷಿಸಲು ಮುಂದಾದ ನಂದೀಶ್ ಗೌಡನ ಎರಡೂ ಕೈಗಳು ಸುಟ್ಟು ಆತ ಕೂಡ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರ ನಡುವೆ ಇದ್ದದ್ದು ಎಂಥ ಸಂಬಂಧವೋ ಗೊತ್ತಿಲ್ಲ. ಆದರೆ ಆಕೆ ಸಾಯ್ತಿನಿ ಅಂತಿದ್ಲು. ಈತ ಸಾಯಿ ಅಂತಿದ್ದ. ಕೊನೆಗೊಂದು ದಿನ ಅದು ನಡೆದೇ ಹೋಯ್ತು. ಆಕೆಯೇ ಬೆಂಕಿ ಹಚ್ಚಿಕೊಂಡಳೋ ಅಥವಾ ನಂದೀಶ್ ಗೌಡನೇ ಹಚ್ಚಿದ್ನೋ ಗೊತ್ತಿಲ್ಲ. ಆದರೆ ಆತ ಆಕೆಯನ್ನ ರಕ್ಷಿಸಲು ಹೋದಾಗ ನನ್ನ ಕೈಗಳು ಸುಟ್ಟುಹೋಗಿವೆ ಎಂದು ಪೊಲೀಸರಿಗೆ ಹೇಳಿದ್ದಾನೆ.
ಇತ್ತ ಮೃತ ಸವಿತಾಳ ಸಹೋದರ ನಾಗೇಶ್ ನಂದೀಶ್ ಗೌಡನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಎಫ್.ಐ.ಆರ್. ಕೂಡ ದಾಖಲಾಗಿದೆ. ಎರಡೂ ಕೈಗಳನ್ನ ಸುಟ್ಟುಕೊಂಡು ಆಸ್ಪತ್ರೆ ಪಾಲಾಗಿರೋ ನಂದೀಶ್ ಗೌಡ ಗುಣಮುಖರಾಗೋದನ್ನ ಪೊಲೀಸರು ಕಾಯ್ತಿದ್ದಾರೆ. ಸವಿತಾ ಹಾಗೂ ನಂದೀಶ್ ಗೌಡ ಮೊಬೈಲ್ನಲ್ಲಿ ನಡೆಸಿರೋ ಸಾಯ್ತೀನಿ, ನಾನೇ ಬೆಂಕಿ ಪೊಟ್ಟಣ ತರ್ತೀನಿ ಎಂಬ ಆಡಿಯೋ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆ.
ನಂದೀಶ್ ಗೌಡ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಲಿದ್ದಾರೆ. ಸವಿತಾಳಿಗಿದ್ದ ಎರಡು ಮಕ್ಕಳು ಅತ್ತ ಅಪ್ಪನೂ ಇಲ್ಲ. ಇತ್ತ ಅಮ್ಮನೂ ಇಲ್ಲ ಎಂಬಂತಾಗಿದೆ. ನಂದೀಶ್ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ತನಿಖೆ ಆರಂಭಿಸೋ ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನೋದನ್ನ ಸಾಬೀತುಪಡಿಸಬೇಕಿದೆ.