– ಪೇದೆ ಅಂಗೈಯಲ್ಲಿತ್ತು ಹಂತಕರ ಹಣೆಬರಹ
ಹರ್ಯಾಣ: ಕಳೆದ ಮಂಗಳವಾರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೊಂದು ಹಾಕಿದ್ದ ಆರು ಜನ ಆರೋಪಿಗಳನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ ಕಳೆದ ಮಂಗಳವಾರ ಪೊಲೀಸ್ ಅಧಿಕಾರಿಗಳಾದ ರವೀಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಈ ಆರೋಪಿಗಳನ್ನು ಪೊಲೀಸ್ ಪೇದೆ ರವೀಂದರ್ ಅವರು ಸಾವಿಗೂ ಮುನ್ನ ನೀಡಿದ ಸುಳಿವಿನಿಂದ ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಕೊರೊನಾ ವೈರಸ್ ಭೀತಿಯ ನಡುವೆಯೂ ಬುಟಾನಾ ಪೊಲೀಸ್ ಠಾಣೆ ಬಳಿಯ ಸೋನಿಪತ್-ಜಿಂದ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಕೆಲ ಪುಂಡರು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಇದನ್ನು ಕೇಳಲು ರವೀಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಹೋಗಿದ್ದಾರೆ. ಆಗ ಕುಡಿತದ ಅಮಲಿನಲ್ಲಿದ್ದ ಪುಂಡರು ಅರಿತವಾದ ಅಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಕೊಂದು ಹಾಕಿದ್ದರು.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಪೇದೆ ರವೀಂದರ್ ಸಿಂಗ್, ಸಾಯುವ ಮುನ್ನ ಆರೋಪಿಗಳ ಕಾರಿನ ನಂಬರ್ ಅನ್ನು ತನ್ನ ಅಂಗೈ ಮೇಲೆ ಬರೆದುಕೊಂಡಿದ್ದರು. ಈ ಸಂಖ್ಯೆ ರವೀಂದ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡುವಾಗ ವೈದ್ಯರಿಗೆ ಸಿಕ್ಕಿದೆ. ನಂತರ ಈ ಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಹರ್ಯಾಣದ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್, ನಮ್ಮ ಅಧಿಕಾರಿಗಳನ್ನು ಕೊಂದ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಸಾಯುವ ಮುನ್ನವು ತನ್ನ ಪೊಲೀಸ್ ಕೌಶಲ್ಯವನ್ನು ತೋರಿಸಿರುವ ನಮ್ಮ ಧೈರ್ಯಶಾಲಿ ಪೇದೆ ರವೀಂದರ್ ಸಿಂಗ್, ಆರೋಪಿಗಳ ಕಾರಿನ ನಂಬರ್ ಅನ್ನು ತಮ್ಮ ಅಂಗೈಯಲ್ಲಿ ಬರೆದುಕೊಂಡಿದ್ದರು. ಮರಣೋತ್ತರ ಪರೀಕ್ಷೆ ವೇಳೆ ನಮಗೆ ಈ ನಂಬರ್ ಸಿಕ್ಕಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಜಾಗದಲ್ಲಿ ಕಾರನ್ನು ನಿಲ್ಲಿಸಿಕೊಂಡು ಡ್ರಿಂಕ್ಸ್ ಮಾಡಬೇಡಿ ಎಂದು ಬುದ್ಧಿ ಹೇಳಲು ಹೋದ ಪೊಲೀಸರನ್ನು, ಎಣ್ಣೆಯ ನಶೆಯಲ್ಲಿ ಪುಂಡರು ಚುಚ್ಚಿ ಸಾಯಿಸಿದ್ದರು. ಸಾಯುವ ವೇಳೆಯಲ್ಲೂ ತನ್ನ ಕರ್ತವ್ಯ ಮಾಡಿ ಪ್ರಾಣ ಬಿಟ್ಟ ಪೇದೆ ರವೀಂದರ್ ಸಿಂಗ್ ಅವರಿಗೆ ಮರಣ ನಂತರದ ಪೊಲೀಸ್ ಪದಕ ಕೊಡಲಾಗುವುದು ಎಂದು ಮನೋಜ್ ಯಾದವ್ ತಿಳಿಸಿದ್ದಾರೆ.