ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

Public TV
2 Min Read
Swami Agnivesh

ನವದೆಹಲಿ: ಹರಿಯಾಣ ಮಾಜಿ ಶಾಸಕ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಆಗ್ನಿವೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

80 ವರ್ಷದ ಸ್ವಾಮಿ ಅಗ್ನಿವೇಶ್ ಅವರು ಮಂಗಳವಾರ ನವದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಸ್‍ಬಿಎಸ್) ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಸಾವನ್ನಪ್ಪಿದ್ದಾರೆ.

ಸೆ.21, 1939 ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂ ನಲ್ಲಿ ಜನಿಸಿದ್ದ ಅಗ್ನಿವೇಶ್ ಅವರು, ಆರ್ಯ ಸಭಾ ಎಂಬ ರಾಜಕೀಯ ಪಕ್ಷವನ್ನು 1970 ರಲ್ಲಿ ಸ್ಥಾಪಿಸಿದ್ದರು. ಈ ಪಕ್ಷ ಆರ್ಯ ಸಮಾಜದ ತತ್ವಗಳನ್ನು ಆಧರಿಸಿದೆ. ಸ್ತ್ರೀ ಭ್ರೂಣ ಹತ್ಯೆ ಮತ್ತು ಮಹಿಳೆಯರ ಶೋಷಣೆಯ ವಿರುದ್ಧದ ಅಭಿಯಾನ, ಜೀತದಾಳುಗಳ ಮುಕ್ತಿಗಾಗಿ ಸೇರಿದಂತೆ ಸಾಮಾಜಿಕ ಕ್ರೀಯಾಶೀಲತೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಮ್ಮ ನಾಯಕರ ನಿಧನಕ್ಕೆ ಸಂತಾಪ ಸೂಚಿಸಿರುವ ಕಾರ್ಯಕರ್ತ, ವಕೀಲ ಪ್ರಶಾಂತ್ ಭೂಷಣ್, ಸ್ವಾಮಿ ಅಗ್ನಿವೇಶ್ ಅವರ ನಿಧನ ದೊಡ್ಡ ದುರಂತವಾಗಿದ್ದು, ಅವರು ಮಾನವೀಯತೆ ಮತ್ತು ಸಹಿಷ್ಣುತೆಯ ನಿಜವಾದ ಯೋಧರಾಗಿದ್ದರು. ಅಲ್ಲದೇ ಸಾರ್ವಜನಿಕರ ಒಳಿತಿಗಾಗಿ ಭಾರೀ ಅಪಾಯಗಳನ್ನು ಎದುರಿಸಲು ಸಿದ್ಧರಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಅವರ ಮೇಲೆ ನಡೆದ ಹಲ್ಲೆಯಿಂದಾಗಿ ಅವರ ಯಕೃತ್ ಹಾನಿಗೊಳಗಾಗಿತ್ತು ಎಂದು ತಿಳಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ವೇಳೆಯೂ ಅವರ ಮೇಲೆ ಹಲ್ಲೆ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *