ಸುರೇಶ್ ಬಾಬು (ಅರುಣ್ ಸುರೇಶ್), ಚಂದನವನದಲ್ಲಿ ಹೆಸರು ಮಾಡುತ್ತಿರುವ ಪ್ರತಿಭಾವಂತ ಛಾಯಾಗ್ರಾಹಕ. ಜಸ್ಟ್ ಲವ್ ಸಿನಿಮಾ ಮೂಲಕ ಸ್ವತಂತ್ರ ಛಾಯಾಗ್ರಾಹಕನಾಗಿ ಗುರುತಿಸಿಕೊಂಡ ಸುರೇಶ್ ಬಾಬು ಕೈ ತುಂಬಾ ಈಗ ಅವಕಾಶಗಳ ಸಾಲು. ತಂತ್ರಜ್ಞನಾಗಿ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಹೊಸತನದ ಹಾದಿಯಲ್ಲಿ ಸಾಗುತ್ತಿರುವ ಸುರೇಶ್ ಬಾಬು ಆರಂಭಿಕ ದಿನಗಳು ಶುರುವಾಗಿದ್ದೇ ಒಂದು ರೋಚಕ ಕಥೆ.
Advertisement
ಹೌದು, ಸುರೇಶ್ ಬಾಬು ಆರಂಭಿಕ ಜೀವನ ಶುರುವಾಗಿದ್ದು ಹತ್ತೊಂಬತ್ತು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಜನರೇಟರ್ ಕ್ಲೀನರ್ ಆಗಿ. ಅಂದು ಊಟ, ಸಂಬಳ ಸಿಕ್ಕಿದ್ರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದ ಸುರೇಶ್ ಬಾಬು ಇಂದು ಛಾಯಾಗ್ರಾಹಕನಾಗಿ ಹೆಸರು ಮಾಡುವುದರ ಜೊತೆಗೆ ಒಂದಿಷ್ಟು ಪ್ರತಿಭೆಗಳಿಗೆ ಕೆಲಸ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇದೆಲ್ಲದರ ಹಿಂದೆ ಇದ್ದಿದ್ದು ಅವರ ಪರಿಶ್ರಮ ಹಾಗೂ ಛಲ. ಜನರೇಟರ್ ಕ್ಲೀನಿಂಗ್ ಕೆಲಸ ಮಾಡುತ್ತಲೇ ಕ್ಯಾಮೆರಾ ಸೆಳೆತಕ್ಕೆ ಒಳಗಾಗಿ ಕ್ಯಾಮೆರಾ ನಿರ್ವಹಣೆಯ ಒಳ ಹೊರಗನ್ನು ಕಲಿತುಕೊಂಡ ಸುರೇಶ್ ಬಾಬು ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಲೈಟ್ ಬಾಯ್ ಆಗಿ, ಕ್ಯಾಮೆರಾ ಅಸಿಸ್ಟೆಂಟ್ ಆಗಿ ದುಡಿದಿದ್ದಾರೆ.
Advertisement
Advertisement
ಕ್ಯಾಮೆರಾ ನಿರ್ವಹಣೆ ಕುರಿತಂತೆ ಕೆಲವೊಂದನ್ನು ನೋಡಿ, ಕೆಲವೊಂದನ್ನು ಬೇರೆಯವರಿಂದ ಕೇಳಿ ಕಲಿಯುತ್ತಾ ಇಂದು ಸಿನಿಮಾ ಛಾಯಾಗ್ರಾಹಕನಾಗಿ ಬೆಳೆದಿದ್ದಾರೆ. ಜೆಕೆ ಅಭಿನಯದ ‘ಜಸ್ಟ್ ಲವ್’ ಸಿನಿಮಾ ಮೂಲಕ ಛಾಯಾಗ್ರಾಹಕನಾಗಿ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟ ಸುರೇಶ್ ಬಾಬು, ಚಂದ್ರಿಕಾ, ವಜ್ರ, ದೇವರಂತ ಮನುಷ್ಯ, ಗಿರ್ ಗಿಟ್ಲೆ ಸಿನಿಮಾಗಳಿಗೆ ಕ್ಯಾಮೆರಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸದ್ಯ ವಾವ್ ಹಾಗೂ ನಕ್ಷೆ ಸಿನಿಮಾಗಳನ್ನು ಸೆರೆಹಿಡಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳ ಜೊತೆ ಹಲವು ಸಿನಿಮಾಗಳ ಆಫರ್ ಗಳೂ ಸುರೇಶ್ ಬಾಬು ಅವರನ್ನರಸಿ ಬರುತ್ತಿವೆ.
Advertisement
19 ವರ್ಷಗಳ ಪಯಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಸುರೇಶ್ ಬಾಬು ಇಂದು ತಮ್ಮದೇ ಆದ ಸಿನಿಮಾ ಕ್ಯಾಮೆರಾ, ಯೂನಿಟ್‍ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ `ಬಾನವಿ ಕ್ಯಾಪ್ಚರ್’ ಎಂಬ ಸಂಸ್ಥೆಯನ್ನು ತೆರೆದಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿರುವ ಸುರೇಶ್ ಬಾಬು ಪ್ರೊಡಕ್ಷನ್ ಹೌಸ್ ತೆರೆಯುವ ಯೋಜನೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿರುವ ಇವರು ಪಬ್ಲಿಕ್ ಟಾಯ್ಲೆಟ್ ಎಂಬ ಕಿರುಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಹೀಗೆ ಸ್ವಂತ ಪರಿಶ್ರಮ, ಛಲ, ಸ್ನೇಹಿತರು, ಕುಟುಂಬಸ್ಥರ ಸಹಕಾರದಿಂದ ಸಾಧನೆಯ ಹಾದಿಯಲ್ಲಿ ಗೆಲುವಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ ಛಾಯಾಗ್ರಾಹಕ ಸುರೇಶ್ ಬಾಬು.