ಶಿವಮೊಗ್ಗ: ಆದಾಯ ತೆರಿಗೆ ಅಧಿಕಾರಿಗಳೆಂದು ವಂಚಿಸಿ ಹಣವನ್ನು ಪಡೆಯುತ್ತಿದ್ದ ಮೂವರು ನಕಲಿ ಅಧಿಕಾರಿಗಳನ್ನು ಸಾಗರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಭದ್ರಾವತಿ ಮೂಲದ ಚಂದನ್, ನವೀನ ಮತ್ತು ಲತೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 1.50 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಇಟಿಯಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್‍ಪಿ ಕೆ.ಎಂ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.
Advertisement
Advertisement
ಜೂನ್ 12ರಂದು ಜನ್ನೆಹಕ್ಲುವಿನ ವಿಶ್ವನಾಥ್ ಎಂಬುವವರ ಮನೆಗೆ ನಾಲ್ವರು ಅಪರಿಚಿತರು ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಎಂದು ಹೇಳಿದ್ದರು. ನಂತರ ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೆದರಿಸಿ ಅವರಿಂದ 2.30 ಲಕ್ಷ ಹಾಗೂ ಖಾಲಿ ಚೆಕ್ ಪಡೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.
Advertisement
Advertisement
ಈ ಸಂಬಂಧ ವಿಶ್ವನಾಥ್ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮೂವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆನಂದಪುರ ಸಮೀಪದ ದಾಸಕೊಪ್ಪ ವೃತ್ತದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.