ಬೆಂಗಳೂರು: ಮೇಲ್ಮೆನೆಯಲ್ಲಿ ಸಭಾಪತಿಗಳ ರಾಜೀನಾಮೆ ಪ್ರಹಸನಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಭಾಪತಿಗಳ ವಿರುದ್ಧ ಬಿಜೆಪಿ-ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದ ಕಾರಣ ಪ್ರತಾಪ್‍ಚಂದ್ರ ಶೆಟ್ಟಿ, ಕಲಾಪ ಮುಗಿಯಲು ಒಂದು ದಿನ ಇರುವಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇಂದಿನ ಕಲಾಪದ ಅಂತ್ಯದ ವೇಳೆಗೆ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಯಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವುದಕ್ಕೂ ಮುನ್ನ ಮಾತನಾಡಿದ ಅವರು, ಈಗ ನನ್ನ ಜವಾಬ್ದಾರಿ ಮುಗಿದಿದೆ. ನಾನು ನಿರಾಳನಾಗಿದ್ದೇನೆ. ಸದನದ ಬಲಾಬಲಗಳು ಬದಲಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.
ತಾಂತ್ರಿಕವಾಗಿ ಬಹುಮತ ಸಾಬೀತು ಮಾಡುವುದಕ್ಕೆ ನನಗೆ ಮುಂದಿನ ಅಧಿವೇಶನದ ತನಕವೂ ಸಮಯಾವಕಾಶ ಇದೆ. ಆದರೆ ಬದುಕಿನಲ್ಲಿ ನೈತಿಕತೆಗೆ ಅಪಾರವಾದ ಬೆಲೆ ಕೊಡುತ್ತಾ ಬಂದವನು ನಾನು. ಈ ಹಿನ್ನೆಲೆಯಲ್ಲಿ ಚರ್ಚೆಗೆ ಆಸ್ಪದ ಕೊಡದೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆಯನ್ನು ಸದನದ ನಿಯಮದಂತೆ ಉಪ ಸಭಾಪತಿಗಳಿಗೆ ಕಲಾಪ ಮುಗಿದ ತಕ್ಷಣ ಸಲ್ಲಿಸುತ್ತಿದ್ದೇನೆ. ಪೀಠ ತ್ಯಾಗ ಮಾಡುತ್ತಿದ್ದೇನೆ. ನನಗೆ ಸಹಕಾರ ಕೊಟ್ಟ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.
ಸಭಾ ನಾಯಕರು, ಪ್ರತಿ ಪಕ್ಷದ ನಾಯಕರು, ಸದನದ ಸಿಬ್ಬಂದಿ ಎಲ್ಲರ ಸಹಕಾರ ನೆನೆಯುತ್ತೇನೆ. ಮುಂದಿನ ದಿನಗಳಲ್ಲಿ ಬರಲಿರುವ ವ್ಯವಸ್ಥೆಗೂ ತಮ್ಮೆಲ್ಲರ ಸಹಕಾರ ಸಿಗಲಿ ಎಂದು ಆಶಿಸುತ್ತೇನೆ ಎಂದು ಹೇಳಿ ರಾಜೀನಾಮೆ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ, ಪ್ರತಾಪ್ ಚಂದ್ರಶೆಟ್ಟಿ ಮತ್ತು ಬಸವರಾಜ್ ಹೊರಟ್ಟಿ ಮಾತುಕತಡೆ ನಡೆಸಿದ್ದು ಕಂಡು ಬಂತು. ಕಳೆದ ತಿಂಗಳೇ ಸಭಾಪತಿ ಚುನಾವಣೆ ಸಂಬಂಧ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ವು. ಆಗಲೇ ಸಭಾಪತಿಗಳು ರಾಜೀನಾಮೆ ನೀಡಬೇಕಿತ್ತು. ಈ ಸಂಬಂಧ ಕಳೆದ ತಿಂಗಳು ಪರಿಷತ್‍ನಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಇದಾದ 10 ದಿನಕ್ಕೆ ಅಂದಿನ ಉಪಸಭಾಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ರು.
ಪ್ರತಾಪ್‍ಚಂದ್ರ ಶೆಟ್ಟಿ ರಾಜೀನಾಮೆಯಿಂದಾಗಿ ಇದೀಗ ಬಸವರಾಜ್ ಹೊರಟ್ಟಿ ಸಭಾಪತಿಗಳಾಗೋದು ಬಹುತೇಕ ಖಚಿತವಾಗಿದೆ. ಆದ್ರೆ, ಈ ಪ್ರಕ್ರಿಯೆ ಮುಗಿಯಲು ಒಂದೆರಡು ದಿನ ಬೇಕಾಗುತ್ತದೆ. ಹೀಗಾಗಿ ಪರಿಷತ್ ಕಲಾಪವನ್ನು ಎರಡು ದಿನ ವಿಸ್ತರಿಸಲು ಸರ್ಕಾರ ಪತ್ರ ಬರೆದಿದೆ.