ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗಲು ಅದೆಷ್ಟೋ ಯುವತಿಯರು ತುದಿಗಾಲಲ್ಲಿ ನಿಂತಿದ್ದ ವಿಚಾರ ಎಲ್ಲರಿಗೆ ತಿಳಿದೇ ಇದೆ. ಅಂತೆಯೇ ಇದೀಗ ಪಾಕಿಸ್ತಾನದ ನಟಿಯೊಬ್ಬಳು ಸಲ್ಮಾನ್ಗಾಗಿ ಭಾರತಕ್ಕೆ ಬಂದಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಹೌದು. ನಟಿ ಸೋಮಿ ಅಲಿಯೇ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದ ನಟಿ. ಈಕೆ ಬಾಲಿವುಡ್ ಬಾಯ್ ಜಾನ್ ನನ್ನು ಮದುವೆಯಾಗುವ ಒಂದೇ ಉದ್ದೇಶದಿಂದ ಭಾರತಕ್ಕೆ ಬಂದಿರುವ ವಿಚಾರವನ್ನು ಇದೀಗ ಬಯಲು ಮಾಡಿದ್ದಾರೆ.
ಹೌದು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋಮಿ, ತನ್ನ 16ನೇ ವಯಸ್ಸಿನಲ್ಲಿ ಸೋಮಿ ಅಲಿ ಪಾಕಿಸ್ತಾನದಿಂದ ಮುಂಬೈಗೆ ಬಂದಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. 1991ಕ್ಕೆ ನನಗೆ 16 ವರ್ಷ ವಯಸ್ಸು. ಆ ಸಂದರ್ಭದಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದ್ದೆ. ಚಿತ್ರ ನೋಡಿದ ಬಳಿಕ ನನಗೆ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಬೇಕು ಎಂಬ ಆಸೆ ಹುಟ್ಟಿತ್ತು. ಅದೇ ಕನಸಿನಿಂದ ನಾನು ನಾಳೆಯೇ ಭಾರತಕ್ಕೆ ಹೋಗುವುದಾಗಿ ತಾಯಿಗೆ ತಿಳಿಸಿದೆ. ಆದರೆ ಅವರು ನನ್ನ ಮಾತಿಗೆ ಒಪ್ಪಿಗೆ ನೀಡಿಲ್ಲ. ಇದಾದ ಬಳಿಕ ನಾನು ಈ ವ್ಯಕ್ತಿಯನ್ನು ಮದುವೆಯಾಗಬೇಕು, ಅದಕ್ಕಾಗಿ ಭಾರತಕ್ಕೆ ಹೋಗುವುದಾಗಿ ಹೇಳಿ ತಂದೆಗೆ ತಿಳಿಸದೇ ಅಲ್ಲಿಂದ ಹೊರಟೇ ಬಿಟ್ಟೆ ಎಂದು ಹೇಳಿದ್ದಾರೆ.
ಹೀಗೆ ಭಾರತಕ್ಕೆ ಬಂದ ಯುವ ನಟಿಯಾಗಿದ್ದ ಸೋಮಿ ಅಲಿ ಪಂಚತಾರಾ ಹೋಟೆಲಿನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲದೆ ಹೇಗಾದರೂ ಮಾಡಿ ಸಲ್ಮಾನ್ ಖಾನ್ ಅವರನ್ನು ಪಟಾಯಿಸಲೇಬೇಕು ಎಂದು ನಟನೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಬಾಲಿವುಡ್ ಅಂಗಳಕ್ಕೆ ಇಳಿಯುತ್ತಾರೆ. ಆದರೆ ಡೈರೆಕ್ಟರ್ ಹೇಳುವ ರಿಹರ್ಸಲ್ ಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಈ ಮೂಲಕ ನಾನು ಬೇರೆಯವರಿಗಿಂದ ಭಿನ್ನವಾಗಿದ್ದು, ಚಿತ್ರೋದ್ಯಮಕ್ಕೆ ನಾನು ಫಿಟ್ ಅಲ್ಲ ಅಂತ ಅನಿಸುತ್ತಿತ್ತು. ಆದರೂ ಸಲ್ಮಾನ್ ಆಸೆಯಿಂದ ನಟನೆ ಮಾಡಿದೆ ಎಂದು ಸೋಮಿ ವಿವರಿಸಿದ್ದಾರೆ.
ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಳಿಕ ಒಂದು ತನ್ನ ಆಸೆಯಂತೆ ಸಲ್ಮಾನ್ ಖಾನ್ ಜೊತೆ ಸೋಮಿ ಸ್ನೇಹ ಬೆಳೆಸುತ್ತಾರೆ. ಕ್ರಮೇಣ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡಲು ಶುರುವಾಯಿತು. ಆದರೆ ಕೊನೆಗೂ ಸೋಮಿಗೆ ಸಲ್ಮಾನ್ ನನ್ನು ಮದುವೆಯಾಗಲು ಸಾಧ್ಯವಾಗಿಲ್ಲ. ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ತಪ್ಪು ಮಾಡಿದೆ. ಆದರೆ ನಾನು ಮನಸಾರೆ ಪ್ರೀತಿ ಮಾಡಿದ್ದರಿಂದ ಈ ಬಗ್ಗೆ ನನಗೆ ಪಶ್ಚಾತಾಪವಿಲ್ಲ ಎಂದು ಸೋಮಿ ಹೇಳಿದ್ದಾರೆ.
ಇಷ್ಟೆಲ್ಲಾ ಆದ ಬಳಿಕ ಸಲ್ಮಾನ್ ನನ್ನು ವರಿಸಲು ಸಾಧ್ಯವಾಗದಿದ್ದರಿಂದ 1999ರಲ್ಲಿ ಸೋಮಿ ವಾಪಸ್ ಪಾಕಿಸ್ತಾನಕ್ಕೆ ತೆರಳಿದ್ದಾರೆ.