– ಸಾಹಸ ಪ್ರಿಯರಿಗೆ ಜಿಪ್ ಲೈನ್
ಶಿವಮೊಗ್ಗ: ಜಲಪಾತ ಎಂದಾಕ್ಷಣ ನಮ್ಮ ಕಣ್ಮುಂದೆ ಬರೋದು ನಯನ ಮನೋಹರ ವಿಶ್ವ ವಿಖ್ಯಾತ ಜೋಗ ಜಲಪಾತ. ಇದನ್ನು ಇದೀಗ ಸರ್ವಋತು ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲು ಯೋಜಿಸಲಾಗುತ್ತಿದೆ. ಕೇವಲ ಮಳೆಗಾಲದಲ್ಲಿ ಬಂದು ಹೋಗುವ ಪ್ರವಾಸಿಗರಿಗೆ ವರ್ಷವಿಡೀ ಬರಮಾಡಿಕೊಳ್ಳಲು ಜೋಗ ಸಿದ್ಧವಾಗುತ್ತಿದೆ. ಜಲಪಾತದೊಂದಿಗೆ ಸುತ್ತಮುತ್ತಲಿನ ಪ್ರಾಕೃತಿಕ ಪರಿಸರವನ್ನು ವೀಕ್ಷಿಸಿ ಸಂಭ್ರಮಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಎಂದರೆ ನೆನಪಾಗುವುದು ಭೋರ್ಗರೆಯುವ ಜೋಗ ಜಲಪಾತದ ವೈಭವ-ವೈಭೋಗ, ಮಳೆಯ ಸಿಂಚನ. ಜೋಗ ಕಣ್ತುಂಬಿಕೊಳ್ಳಲು ಕೇವಲ ಮಳೆಗಾಲದಲ್ಲಿ ಮಾತ್ರ ಜನ ಬರುತ್ತಾರೆ. ಆದರೆ ವರ್ಷವಿಡೀ ಪ್ರವಾಸಿಗರನ್ನು ಸೆಳೆಯಲು ಜೋಗ ಜಲಪಾತದ ಪರಿಸರ ಕಣ್ತುಂಬಿಕೊಳ್ಳಲು ಕೋಟ್ಯಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಪ್ರವಾಸಿಗರು ಜೋಗ ಜಲಪಾತ ಮತ್ತು ಅಲ್ಲಿನ ನಯನ ಮನೋಹರ ಪ್ರೇಕ್ಷಣೀಯ ತಾಣವನ್ನು ವರ್ಷದ ಎಲ್ಲ ಋತುಮಾನಗಳಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಕೋಟ್ಯಾಂತರ ರು.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಧುಮ್ಮಿಕ್ಕುವ ಜೋಗ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರಾಕೃತಿಕ ಪರಿಸರವನ್ನು ವೀಕ್ಷಿಸಿ ಸಂಭ್ರಮಿಸಲು ಸುಮಾರು 80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ವಿಶೇಷ ವಿನ್ಯಾಸದ ಜಿಪ್ ಲೈನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ 40 ಲಕ್ಷ ರೂ. ಗಳನ್ನು ಮಂಜೂರು ಮಾಡಲಾಗಿದ್ದು, ಸಾಹಸ ಮತ್ತು ಕ್ರೀಡಾ ಪ್ರಿಯರಿಗಾಗಿ ಜಿಪ್ ಲೈನ್ ಮಾಡಲಾಗುತ್ತಿದೆ. ಈ ಮೂಲಕ ಜಿಪ್ ಲೈನ್ ಹೊಂದಿದ ರಾಜ್ಯದ ಮೊದಲ ಪ್ರವಾಸಿ ತಾಣ ಎಂಬ ಹೆಗ್ಗಳಿಕೆಗೂ ಜೋಗ ಪಾತ್ರವಾಗಲಿದೆ. ಸುರಕ್ಷತೆಯ ದೃಷ್ಠಿಯಿಂದ 2 ಕೇಬಲ್ ಗಳನ್ನು ಅಳವಡಿಸಲಾಗುತ್ತಿದ್ದು, ಗುರುತ್ವಾಕರ್ಷಣೆ ಬಲದ ಮೇಲೆ ಇಬ್ಬರು ವ್ಯಕ್ತಿಗಳು, ಏಕಕಾಲದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಸುಮಾರು 450 ಮೀಟರ್ ದೂರದವರೆಗೆ ಸಾಗಬಹುದಾಗಿದೆ. ಜಿಪ್ ಲೈನ್‍ನ ಒಂದು ಕಡೆ 48 ಅಡಿ ಹಾಗೂ ಇನ್ನೊಂದು ಕಡೆಗೆ 16 ಅಡಿ ಎತ್ತರದ ಎರಡು ಸ್ಥಾವರಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ.
ಸಂಸದ ರಾಘವೇಂದ್ರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಜಿಪ್ ಲೈನ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಕೂಡ ನಡೆದಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ.