– ಯಾರ ಮನಸ್ಸಿಗೂ ನೋವು ಮಾಡಲು ಹೇಳಿಲ್ಲ
ಬೆಂಗಳೂರು: ಯುವ ನಟ ಚಿರಂಜೀವು ಸರ್ಜಾ ಅವರ ಮರಣೋತ್ತರ ಪರೀಕ್ಷೆ ಕುರಿತು ನಾನು ಹೇಳಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಸಿಸಿಬಿ ವಿಚಾರಣೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ಈಗಾಗಲೇ ನಾನು ಚಿರಂಜೀವಿ ಸರ್ಜಾ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಬಗ್ಗೆ ನೀಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದರು. ಇದನ್ನೂ ಓದಿ: 10, 15 ಮಂದಿ ಹೆಸರನ್ನು ಹೇಳಿದ್ದೇನೆ: ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ
ಚಿರಂಜೀವಿ ಸರ್ಜಾ ಯುವ ನಟರಾಗಿದ್ದು, ಆದ್ದರಿಂದಲೇ ನಾನು ಹೇಳಿದ್ದೆ. ಅವರು ಈಗ ಇದ್ದಿದ್ದರೆ ಮೇಘನಾ ಅವರು ಖುಷಿಯಿಂದ ಇರುತ್ತಿದ್ದರು. ಸತ್ತವರ ಬಗ್ಗೆ ಮಾತನಾಡಬಾರದು. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಇಂದ್ರಜಿತ್ ಹೇಳಿದ್ದು ಏನು?
ಪಬ್ಲಿಕ್ ಟಿವಿಯೊಂದಿಗೆ ಈ ಹಿಂದೆ ಮಾತನಾಡಿದ್ದ ಇಂದ್ರಜಿತ್ ಲಂಕೇಶ್ ಅವರು, ಮೂರನೇ ಪೀಳಿಗೆಯ ಮತ್ತು ಇತ್ತೀಚಿಗೆ ಬಂದ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿತ್ತು. ಎಲ್ಲಿ ಎಲ್ಲಿ ಯಾವ ಯಾವ ತೋಟದಲ್ಲಿ, ರೆಸಾರ್ಟಿನಲ್ಲಿ ಮತ್ತು ರಾಜಕಾರಣಿಗಳ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಎಲ್ಲ ಗೊತ್ತಿತ್ತು. ನಾವು, ಹಿರಿಯ ನಟರು ಮತ್ತು ನಿರ್ಮಾಪಕರ ಈ ವಿಚಾರದ ಬಗ್ಗೆ ಮಾತನಾಡಿ ಶಾಕ್ ಆಗಿದ್ದು ಉಂಟು. ಇದರ ಬಗ್ಗೆ ಹಿರಿಯ ನಟರಾದ ನನ್ನ ಸ್ನೇಹಿತರು ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಇವತ್ತು ಮೀಡಿಯಾ ಮುಂದೆ ಬರಲು ಕಾರಣ ಸುದ್ದಿವಾಹಿನಿಯಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ಮಾಫಿಯಾದಲ್ಲಿ ಇದೆ ಎಂದು ತೋರಿಸುತ್ತಿರುವುದು ನನಗೆ ನೋವಾಗಿದೆ. ಆದರೆ ಇತ್ತೀಚಿಗೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದರು.