ಸರ್ಕಾರ ರಚನೆಗೆ ಮೂಲ ಕಾರಣ ನಾನು : ಅಬಕಾರಿ ಸಚಿವ ನಾಗೇಶ್

Public TV
2 Min Read
Nagesh 2

– ನನ್ನನ್ನ ಸಂಪುಟದಿಂದ ಕೈ ಬಿಡಲ್ಲ

ಬೆಂಗಳೂರು: ಸರ್ಕಾರ ರಚನೆಗೆ ಮೂಲ ಬುನಾದಿ ಹಾಕಿದವನೇ ನಾನು. ಹಾಗಾಗಿ ಸಂಪುಟದಿಂದ ನನ್ನನ್ನು ಕೈ ಬಿಡುವುದಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ನನಗೆ ನಂಬಿಕೆ ಇದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.

ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಬಜೆಟ್ ಬಳಿಕ ಅಬಕಾರಿ ಸಚಿವ ನಾಗೇಶ್ ಅವರಿಗೆ ಕೊಕ್ ಕೊಟ್ಟು, ಆ ಸ್ಥಾನವನ್ನು ಬಿಎಸ್‍ಪಿ ಉಚ್ಛಾಟಿತ ಎನ್. ಮಹೇಶ್‍ರವರಿಗೆ ನೀಡುವುದಕ್ಕೆ ಸಿಎಂ ಬಿಎಸ್‍ವೈ ಚಿಂತನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

Nagesh 5

ಈ ಕುರಿತಂತೆ ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಬಕಾರಿ ಸಚಿವ ನಾಗೇಶ್, ಸಂಪುಟದಿಂದ ನನ್ನನ್ನು ಕೈ ಬಿಡುವ ವಿಚಾರವನ್ನು ಯಾವುದೋ ಒಂದು ಪತ್ರಿಕೆಯಲ್ಲಿ ಇಂದು ಬೆಳಗ್ಗೆ ನೋಡಿದೆ. ಅದನ್ನು ನೋಡಿ ನನಗೆ ಶಾಕ್ ಆಯಿತು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಮೊದಲು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೆ ನಾನು. ನನ್ನಿಂದಲೇ ಬಿಜೆಪಿ ಸರ್ಕಾರ ರಚಿಸಲು ಸುಗಮವಾಗಿದ್ದು, ನಂತರ ಎಂಟಿಬಿ ನಾಗರಾಜ್ ಮತ್ತು ಶಂಕರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಎಂದು ತಿಳಿಸಿದರು.

n mAHESH

ಈ ಹಿಂದೆ ಯಡಿಯೂರಪ್ಪನವರು ನನಗೆ ನೀನು ಮೂರು ವರ್ಷ ಮಂತ್ರಿಯಾಗಿರುತ್ತೀಯಾ ಎಂದು ಹೇಳಿದ್ದರು. ಹಾಗಾಗಿ ನನಗೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಸಿಎಂ ಎಂದಿಗೂ ಮಾತಿಗೆ ತಪ್ಪುವುದಿಲ್ಲ. ನನಗೆ ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ನನಗೆ ಸಂಪೂರ್ಣ ನಂಬಿಕೆ, ವಿಶ್ವಾಸವಿದೆ. ನನ್ನ ಇಲಾಖೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಅನೇಕ ಸುಧಾರಣೆ ಜಾರಿಗೆ ತಂದಿದ್ದೇನೆ. ಈ ಸರ್ಕಾರ ಬರಲು ನಾನು ಮುಖ್ಯ ಕಾರಣ ಎಂಬುದು ಸ್ವತಃ ಯಡಿಯೂರಪ್ಪನವರಿಗೆ ತಿಳಿದಿದೆ ಎಂದು ಹೇಳಿದರು

Nagesh 3

ಮೊದಲು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೆ ನಾನು. ಬಳಿಕ ಉಳಿದವರು ಧೈರ್ಯ ಮಾಡಿ ರಾಜೀನಾಮೆ ಕೊಟ್ಟರು. ಉಳಿದವರಿಗೂ ಮಂತ್ರಿ ಸ್ಥಾನ ನೀಡಬೇಕು. ಅಲ್ಲದೆ ಶಂಕರ್, ನಾಗರಾಜ್ ಕೊಡುಗೆಯೂ ಸರ್ಕಾರ ರಚನೆಗೆ ಪ್ರಮುಖವಾಗಿದೆ. ಹೀಗಾಗಿ ಅವ್ರಿಗೂ ಮಂತ್ರಿ ಸ್ಥಾನ ನೀಡಬೇಕು ಎಂದರು.

Nagesh 1

ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ನಾಯಕತ್ವದ ಬದಲಾವಣೆ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಅವರು ಜನಪರವಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಸಿಎಂ ಆಗಿರುವವರೆಗೂ ಅವರಿಗೆ ನನ್ನ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ. ನನ್ನನ್ನು ಸರ್ಕಾರ ಕೈ ಬಿಡುವ ಪ್ರಶ್ನೆಯೇ ಇಲ್ಲ ಅಂತಹ ಸಂದರ್ಭ ಏನಾದರೂ ಉದ್ಭವಿಸಿದರೆ ಆಗ ನಾನು ಮಾತನಾಡುತ್ತೇನೆ. ಈ ವಿಚಾರವಾಗಿ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *