– ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ
ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಮೂಲಕ ಅವರ ಋಣ ತೀರಿಸುವುದರ ಜೊತೆಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಈ ಮೂಲಕ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಗೆ ಪರಿಷತ್ ಟಿಕೆಟ್ ನೀಡುವ ಸುಳಿವು ನೀಡಿದ್ದಾರೆ.
ಶಿವಮೊಗ್ಗದ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂಬ ದೃಷ್ಟಿಯಿಂದ ಕೆಲ ಕಾಂಗ್ರೆಸ್, ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬಂದಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರಿಗೆ ಮಾತು ಕೊಟ್ಟು ಮೋಸ ಮಾಡಲು ಬರುವುದಿಲ್ಲ. ಅಲ್ಲದೆ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಅನೇಕ ಸಾಮಾನ್ಯ ಕಾರ್ಯಕರ್ತರು ಇದ್ದಾರೆ. ಅವರಿಗೂ ಅವಕಾಶ ಮಾಡಿಕೊಡಬೇಕಿದೆ ಎಂದರು.
ಪರಿಷತ್ ಚುನಾವಣೆ ಸಂಬಂಧ ಸೋಮವಾರ ಸಂಜೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತೇವೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಬರಲು ಕಾರಣರಾದವರನ್ನು ಹಾಗೂ ಕಾರ್ಯಕರ್ತರನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಟಿಕೆಟ್ ಹಂಚಿಕೆ ವೇಳೆ ಡಿವಿಜನ್ ವಾರ್, ಜಿಲ್ಲಾವಾರು ಹಾಗೂ ಜಾತಿವಾರು ಎಂಬುದು ನಡೆಯುವುದಿಲ್ಲ. ಬಿಜೆಪಿಯಲ್ಲಿ ಜಾತಿವಾರು ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂಬುದು ಸುಳ್ಳು. ಬಿಜೆಪಿಯಲ್ಲಿ ಕಾರ್ಯಕರ್ತರ ಶಕ್ತಿ ಮೇಲೆ ಟಿಕೆಟ್ ಹಂಚಿಕೆ ನಡೆಯಲಿದೆ. ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ ನಡೆಯಲಿದ್ದು, ಸಂಪುಟದಲ್ಲಿ ಖಾಲಿ ಇರುವ ಸ್ಥಾನವನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.