ಕೋಲ್ಕತ್ತಾ: ಸರ್ಕಾರಿ ಶಾಲೆ ಮತ್ತು ಮದರಸಾದಲ್ಲಿ ಓದುತ್ತಿರುವ 12ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ಮಕ್ಕಳ ಖಾತೆಗೆ 10 ಸಾವಿರ ರೂ. ಜಮೆ ಮಾಡಲಾಗುವುದು. ಮಕ್ಕಳು ಈ ಹಣದಿಂದ ಸ್ಮಾರ್ಟ್ ಫೋನ್ ಅಥ್ವಾ ಟ್ಯಾಬ್ಲೆಟ್ ಖರೀದಿಸಬಹುದು ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 9.5 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ 10 ಸಾವಿರ ರೂ. ನಗದು ನೀಡುವ ಯೋಜನೆ ಕುರಿತು ಮಮತಾ ಬ್ಯಾನರ್ಜಿ ಮಾಹಿತಿ ನೀಡಿದರು. ಈ ಮೊದಲು ರಾಜ್ಯ ಸರ್ಕಾರದಿಂದ 10ನೇ ತರಗತಿಯ ಮಕ್ಕಳಿಗೆ ಟ್ಯಾಬ್ಲೇಟ್ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಈ ಸಂಬಂಧ ಟೆಂಡರ್ ಸಹ ಅಂತಿಮ ಹಂತದಲ್ಲಿತ್ತು. ಆದ್ರೆ ಕೇಂದ್ರ ಸರ್ಕಾರ ಚೀನಾ ವಸ್ತುಗಳ ಮೇಲೆ ನಿಷೇಧ ವಿಧಿಸಿದ್ದರಿಂದ ನಗದು ವರ್ಗಾಯಿಸುವ ಬಗ್ಗೆ ನಿರ್ಧರಿಸಲಾಯ್ತು. ಮುಂದಿನ ಮೂರು ವಾರಗಳಲ್ಲಿ ನೇರವಾಗಿ ಸರ್ಕಾರಿ ಶಾಲೆ ಮತ್ತು ಮದರಸಾಗಳ ಮಕ್ಕಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಟ್ಯಾಬ್ಲೆಟ್ ಉತ್ಪಾದನೆಯ ಹಲವು ಕಂಪನಿಗಳ ಜೊತೆ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆ ಮಾತುಕತೆ ನಡೆಸಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಟ್ಯಾಬ್ಲೆಟ್ ಪೂರೈಸಲು ಬಹುತೇಕ ಕಂಪನಿಗಳು ಸಮಯ ಕೇಳಿದ್ದವು. ಈ ನಡುವೆ ಕೇಂದ್ರ ಸರ್ಕಾರದ ಹೊಸ ಅದೇಶಗಳಿಂದ ಟ್ಯಾಬ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳ ಹಿತಕ್ಕಾಗಿ ಸರ್ಕಾರ ಹಣ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಕೊರೊನಾ ಹಿನ್ನೆಲೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದೀದಿ ಸರ್ಕಾರ ಟ್ಯಾಬ್ ನೀಡಲು ಮುಂದಾಗಿದೆ.
ಅತಿ ಹೆಚ್ಚು ಮೆಡಿಕಲ್ ಕಾಲೇಜ್: ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಡತನ ನಿರ್ಮೂಲನೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶಿಶು ಮೃತ್ಯು ದರ ಸಹ ಕಡಿಮೆ ಇದೆ. ರೇಪ್, ಕೊಲೆ, ನಕ್ಸಲ್ ಚಟುವಟಿಕೆಗಳ ಸಂಖ್ಯೆಯೂ ಇಳಿಮುಖವಾಗಿದೆ. ರಾಜಕೀಯ ಗಲಾಟೆಗಳಿಂದ ಹಿಂಸೆ ಪ್ರಕರಣಗಳು ಇಳಿಕೆಯಾಗಿವೆ. ಟಿಎಂಸಿ ಸರ್ಕಾರ ರಾಜ್ಯದಲ್ಲಿ ಅತಿಹೆಚ್ಚು ಮೆಡಿಕಲ್ ಕಾಲೇಜುಗಳನ್ನ ಆರಂಭಿಸಿದೆ. ಬಂಗಾಳದಲ್ಲಿ 272 ಐಟಿಐಗಳಿವೆ. ಪಶ್ಚಿಮ ಬಂಗಾಳದ ಸಾಕ್ಷರತೆತಯೂ ಪ್ರಮಾಣವೂ ಹೆಚ್ಚಿದ್ದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.